ಪ್ರಪಂಚದಾದ್ಯಂತ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಸತ್ತಿನ ಒಳಗೆ ಪ್ರತಿಭಟನೆಗಳು ನಡೆಯುವುದು ಸಾಮಾನ್ಯ ಸಂಗತಿ. ಸಂಸತ್ತಿನಲ್ಲಿ ಅಶಿಸ್ತಿನ ನಡವಳಿಕೆ ಮತ್ತು ಮುಷ್ಟಿ ಕಾಳಗ ನಡೆದಿರುವ ಸಂದರ್ಭಗಳನ್ನು ಸಹ ನಾವು ಕೆಲವೊಮ್ಮೆ ನೋಡುತ್ತಿರುವಾಗ, ಟರ್ಕಿ ಸಂಸತ್ತಿನಲ್ಲಿ ಇತ್ತೀಚೆಗೆ ನಡೆದ ಘಟನೆಯೊಂದರ ವೀಡಿಯೊ ಇಂಟರ್ನೆಟ್ ನಲ್ಲಿ ಪರ – ವಿರೋಧದ ಚರ್ಚೆಗೆ ಕಾರಣವಾಗಿದೆ.
ಇದು ಯಾವುದೇ ಹೊಡೆದಾಟ ಅಥವಾ ಅಶಿಸ್ತಿನ ನಡವಳಿಕೆಯನ್ನು ಹೊಂದಿಲ್ಲ, ಆದರೆ ಸಂಸದರೊಬ್ಬರು ತಮ್ಮ ಅಭಿಪ್ರಾಯವನ್ನು ಸಾಬೀತುಪಡಿಸಲು ಅವರ ಸ್ವಂತ ಫೋನ್ ಅನ್ನು ಒಡೆದು ಹಾಕಿದ್ದಾರೆ. ಪ್ರತಿಪಕ್ಷದ ರಿಪಬ್ಲಿಕನ್ ಪೀಪಲ್ಸ್ ಪಾರ್ಟಿಯ ಸದಸ್ಯ ಬುರಾಕ್ ಎರ್ಬೇ ಅವರು ಪ್ರಸ್ತಾವಿತ ಸರ್ಕಾರದ ಬೆಂಬಲಿತ ಮಸೂದೆಯನ್ನು ವಿರೋಧಿಸಿ ಮಾತನಾಡುತ್ತಿದ್ದರು.
ಆನ್ಲೈನ್ ನಕಲಿ ಸುದ್ದಿಗಳನ್ನು ತಡೆಯುವುದು ಈ ಮಸೂದೆಯ ಉದ್ದೇಶವಾಗಿತ್ತು. ಈ ಕಾನೂನಿನ ಅಡಿಯಲ್ಲಿ, ಸಾಮಾಜಿಕ ಮಾಧ್ಯಮ ನೆಟ್ವರ್ಕ್ಗಳು ಮತ್ತು ಇಂಟರ್ನೆಟ್ ಸೈಟ್ಗಳು “ದಾರಿ ತಪ್ಪಿಸುವ ಮಾಹಿತಿಯನ್ನು ಹರಡುವ” ಶಂಕಿತ ಬಳಕೆದಾರರ ವಿವರಗಳನ್ನು ನೀಡಬೇಕು ಎಂಬ ಪ್ರಸ್ತಾವನೆಯನ್ನು ಹೊಂದಿತ್ತು, ಇದು ತಪ್ಪಿತಸ್ಥರಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆಗೆ ಕಾರಣವಾಗಬಹುದು.
ಆದಾಗ್ಯೂ, ಬುರಾಕ್ ಮಸೂದೆಯನ್ನು ವಿರೋಧಿಸಿದ್ದಾರೆ ಮತ್ತು ಟರ್ಕಿಶ್ ಸರ್ಕಾರ ಮಸೂದೆಯನ್ನು ಅಂಗೀಕರಿಸಿದರೆ, ಅದು ಮುಂದೊಂದು ದಿನ ನಾಗರಿಕರ ಮೊಬೈಲ್ ಫೋನ್ಗಳಿಗೂ ವಿಸ್ತರಣೆಯಾಗಬಹುದು ಎಂದು ಆರೋಪಿಸಿದ್ದಾರೆ. ತನ್ನ ಮಾತನ್ನು ಸಾಬೀತುಪಡಿಸಲು, ಸಂಸದರು ತಮ್ಮ ಸ್ಮಾರ್ಟ್ ಫೋನ್ ಅನ್ನು ತೆಗೆದುಕೊಂಡು ಅದನ್ನು ಸುತ್ತಿಗೆಯಿಂದ ಒಡೆದಿದ್ದಾರೆ.