ಪ್ರಯಾಣಿಕರು ರೈಲಿನಿಂದ ಇಳಿದ ವೇಳೆ ನಿಲ್ದಾಣದಿಂದ ಹೊರ ಹೋಗಲು ಸೂಕ್ತ ವ್ಯವಸ್ಥೆ ಇರದ ಕಾರಣ ರೈಲು ಹಳಿ ದಾಟಬೇಕಾದ ಪರಿಸ್ಥಿತಿ ಬಂದ ಪಕ್ಷದಲ್ಲಿ ಅಂತಹ ವೇಳೆ ಅಪಘಾತ ಸಂಭವಿಸಿದರೆ ಆ ಪ್ರಯಾಣಿಕರು ಅಥವಾ ಅವರ ಕುಟುಂಬಸ್ಥರು ಪರಿಹಾರ ಪಡೆಯಲು ಅರ್ಹರಾಗುತ್ತಾರೆ ಎಂದು ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಪ್ರಕರಣದ ವಿವರ: 35 ವರ್ಷದ ಮನೋಜ್ ಎಂಬವರು 2019ರ ಫೆಬ್ರವರಿಯಲ್ಲಿ ತಮ್ಮ ಸಂಬಂಧಿಗಳೊಂದಿಗೆ ಗೊಂಡಿಯಾದಿಂದ ರೆವರಾಲ್ಗೆ ಪ್ರಯಾಣಿಸುತ್ತಿದ್ದರು. ರೆವರಾಲ್ ನಲ್ಲಿ ಇಳಿದ ಬಳಿಕ ಅಲ್ಲಿ ಹಳಿ ದಾಟಲು ಯಾವುದೇ ಮೇಲ್ಸೇತುವೆ ಇಲ್ಲದ ಕಾರಣ ಹಳಿ ದಾಟುತ್ತಿದ್ದಾಗ ವೇಗವಾಗಿ ಬಂದ ರೈಲು ಅವರಿಗೆ ಡಿಕ್ಕಿ ಹೊಡೆದಿತ್ತು. ಇದರ ಪರಿಣಾಮ ಮನೋಜ್ ಸ್ಥಳದಲ್ಲಿಯೇ ಸಾವನ್ನಪ್ಪಿದರೆ ಅವರ ಸಂಬಂಧಿಗಳು ಗಾಯಗೊಂಡಿದ್ದರು.
ಈ ಹಿನ್ನೆಲೆಯಲ್ಲಿ ಪರಿಹಾರ ಕೋರಿ ಮನೋಜ್ ಪತ್ನಿ ಹಾಗು ಪುತ್ರ ಮೊರೆ ಹೋದ ವೇಳೆ ಇದು ನಿರ್ಲಕ್ಷದಿಂದ ರೈಲು ಹಳಿ ದಾಟಿದ ಪರಿಣಾಮ ಆದ ಅಪಘಾತ. ಹಾಗಾಗಿ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ತಿಳಿಸಲಾಗಿತ್ತು. ಹೀಗಾಗಿ ಅವರು ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದರ ವಿಚಾರಣೆ ನಡೆದು ಅಂತಿಮವಾಗಿ ಈಗ ತೀರ್ಪು ಹೊರಬಿದ್ದಿದೆ.
ಮನೋಜ್ ಟಿಕೆಟ್ ಪಡೆದು ಅಧಿಕೃತವಾಗಿ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಅಲ್ಲದೆ ಅವರು ನಿಲ್ದಾಣದಲ್ಲಿ ಇಳಿದ ವೇಳೆ ಹಳಿ ದಾಟಲು ಅಲ್ಲಿ ಯಾವುದೇ ಸೂಕ್ತ ವ್ಯವಸ್ಥೆ ಇರಲಿಲ್ಲ. ಹೀಗಾಗಿ ರೈಲು ಹಳಿಗಳ ಮೇಲೆ ನಡೆದುಕೊಂಡು ಹೋಗಿದ್ದಾರೆ. ಇದನ್ನು ನಿರ್ಲಕ್ಷ್ಯವೆಂದು ಹೇಳಲಾಗುವುದಿಲ್ಲವೆಂದು ಅಭಿಪ್ರಾಯಪಟ್ಟ ನ್ಯಾಯಪೀಠ, ಮನೋಜ್ ಕುಟುಂಬಸ್ಥರಿಗೆ 8 ಲಕ್ಷ ರೂಪಾಯಿಗಳ ಪರಿಹಾರ ನೀಡುವಂತೆ ಆದೇಶಿಸಿದೆ.