ನರಕ ಚತುರ್ದಶಿ ಕಳೆದು ಅಮಾವಾಸ್ಯೆ ಆಗಮನವಾಗುತ್ತಿದ್ದಂತೆ, ಲಕ್ಷ್ಮಿ ಮನೆಮನೆಗೆ ಕಾಲಿಡುತ್ತಾಳೆ. ಬಡವರಿಂದ ಹಿಡಿದು ಶ್ರೀಮಂತರಾದಿಯಾಗಿ ಎಲ್ಲರೂ ತಮ್ಮ ತಮ್ಮ ಶಕ್ತಿಯಾನುಸಾರ ಪೂಜೆ ಮಾಡಿ ಸಂತಸಪಡುತ್ತಾರೆ.
ಎಲ್ಲೆಲ್ಲೂ ‘ಭಾಗ್ಯದಾ ಲಕ್ಷ್ಮಿ ಬಾರಮ್ಮ’ ಗೀತೆ ಮೊಳಗುತ್ತಿರುತ್ತದೆ. ವರ್ತಕರ ಪಾಲಿಗಂತೂ ದೀಪಾವಳಿಯ ಲಕ್ಷ್ಮಿಪೂಜೆ ಎಂಬುದು ವಾರ್ಷಿಕವಾಗಿ ಆಚರಿಸುವ ಅತ್ಯಂತ ದೊಡ್ಡ ಹಬ್ಬ. ತಮ್ಮ ವ್ಯಾಪಾರದ ಅಭಿವೃದ್ಧಿಗಾಗಿ ಧನ ದೇವತೆಯನ್ನ ಪೂಜಿಸುವ ಸುಕಾಲ.
ನಗರ ಪ್ರದೇಶಗಳಲ್ಲಿಯ ವರ್ತಕರು ಅತ್ಯಂತ ವೈಭವೋಪೇತವಾಗಿ ಲಕ್ಷ್ಮಿ ಪೂಜೆಯನ್ನ ನೆರವೇರಿಸುತ್ತಾರೆ. ದೀಪಾವಳಿಯಲ್ಲಿ ಸಾಮಾನ್ಯವಾಗಿ ಎಲ್ಲ ವರ್ಗಗಳ ಜನರಿಂದಲೂ ಲಕ್ಷ್ಮಿ ಪೂಜೆ ನಡೆದರೂ, ಇದನ್ನು ವಿಶೇಷವಾಗಿ ವ್ಯಾಪಾರಸ್ಥರ ದೊಡ್ಡ ಪೂಜೆ ಎಂದು ಕೆಲವರು ಕರೆಯುತ್ತಾರೆ. ತಮ್ಮ ವ್ಯಾಪಾರ ಅಭಿವೃದ್ಧಿಯಾಗಿ ಲಕ್ಷ್ಮಿಯ ಕೃಪಾಕಟಾಕ್ಷ ಇನ್ನಷ್ಟು ಲಭಿಸಲಿ ಎಂಬ ಉದ್ದೇಶದಿಂದ ಧನ ದೇವತೆಯಾದ ಮಹಾಲಕ್ಷ್ಮಿಯನ್ನ ದೀಪಾವಳಿಯಲ್ಲಿ ಆರಾಧಿಸಲಾಗುತ್ತದೆ. ಮಹಾಲಕ್ಷ್ಮಿ ಪೂಜೆಯ ಜತೆಗೆ ಧನಾಧ್ಯಕ್ಷ ಕುಬೇರನನ್ನೂ ಆರಾಧಿಸುವ ಪದ್ಧತಿ ಹಲವೆಡೆಗಳಲ್ಲಿದೆ.
ಆದರೆ ಲಕ್ಷ್ಮಿ ಪೂಜೆ ಕೇವಲ ಹಣಕಾಸು ಸಂಪಾದನೆಯ ಆಕಾಂಕ್ಷೆಗಾಗಿ ಮಾತ್ರ ನಡೆಯುವ ಆಚರಣೆಯಲ್ಲ. ಮಹಾಲಕ್ಷ್ಮಿಯು ಕೇವಲ ಲೌಕಿಕ ಧನ ಸಂಪತ್ತಿನ ದೇವತೆಯಲ್ಲ. ಶ್ರೇಯಸ್ಸಿನ ಎಲ್ಲ ರೂಪಗಳೂ ಕೂಡ ಲಕ್ಷ್ಮೀ ಸ್ವರೂಪಗಳೇ. ಸಮಸ್ತ ಸನ್ಮಂಗಲಗಳ ಮಂಗಲದೇವತೆ ಎಂದೆನೆಸಿಕೊಂಡಿರುವ ಲಕ್ಷ್ಮಿ ಧನ ಧಾನ್ಯಾದಿ ರೂಪವಾದ ಅಷ್ಟಲಕ್ಷ್ಮೀರೂಪಿಯಾಗಿದ್ದಾಳೆ.
ಹಾಗೆಯೇ ಧರ್ಮಲಕ್ಷ್ಮೀ ಮತ್ತು ಮೋಕ್ಷ ಲಕ್ಷ್ಮಿಯೂ ಆಗಿದ್ದಾಳೆ. ಕೇವಲ ಧನ, ಶ್ರೀಮಂತಿಕೆಯೊಂದೇ ಜೀವನವಲ್ಲ, ನ್ಯಾಯ, ನೀತಿ, ಧರ್ಮಗಳು ನಮ್ಮ ಜೀವನದಲ್ಲಿ ಅಡಕವಾಗಿದ್ದರೆ, ಕೊನೆಯಲ್ಲಿ ಮೋಕ್ಷ ಲಕ್ಷ್ಮಿ ಒಲಿಯುತ್ತಾಳೆ. ಹೀಗಾಗಿ ಲಕ್ಷ್ಮಿ ಕೇವಲ ಶ್ರೀಮಂತರ ದೇವತೆ ಮಾತ್ರವಲ್ಲ. ಸರ್ವ ಪುರುಷಾರ್ಥ ಲಕ್ಷ್ಮೀಪ್ರಾಪ್ತಿಗಾಗಿ ಆಚರಿಸುವ ಲಕ್ಷ್ಮೀಪೂಜೆಯ ಹಬ್ಬ ಇದು. ಧರ್ಮಕ್ಕೆ ಅನುಗುಣವಾದ ಧನಧಾನ್ಯಾದಿ ಸಂಪತ್ತೂ ಅಪೇಕ್ಷಣೀಯವೇ ಆಗಿದ್ದರೂ ಕೂಡ ಸತ್ಯ ಧರ್ಮಗಳು ಕೂಡ ದೈವ ಸ್ವರೂಪ ಎಂಬುದನ್ನ ಎಲ್ಲ ವ್ಯಾಪಾರಸ್ಥರಾದಿಯಾಗಿ ಎಲ್ಲರೂ ನೆನಪಿನಲ್ಲಿಡಬೇಕು. ನ್ಯಾಯ ಧರ್ಮದಿಂದ ವ್ಯಾಪಾರ ನಡೆಸಿ ಧನಲಕ್ಷ್ಮಿಯನ್ನ ಪಡೆದರೆ ಮಾತ್ರ ಆಕೆ ಸದಾ ವಿಜಯವನ್ನೇ ಕರುಣಿಸುತ್ತಾಳೆ ಎಂಬುದು ಎಲ್ಲರಿಗೂ ಅರ್ಥವಾಗಬೇಕು.