ಶಿವಮೊಗ್ಗ: ಕೇಂದ್ರ ಸರ್ಕಾರ ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆಯ ಖಾಸಗೀಕರಣ ಪ್ರಕ್ರಿಯೆಯನ್ನು ಹಿಂಪಡೆದಿರುವುದರಿಂದ ಗೆಲುವಿಗಿಂತ ಕಾರ್ಖಾನೆಯ ಅಭಿವೃದ್ಧಿಗಾಗಿ ಜವಾಬ್ದಾರಿ ಹೆಚ್ಚಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಅವರು ಇಂದು ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಷ್ಟದಲ್ಲಿದ್ದ ಕಾರ್ಖಾನೆಯನ್ನು ಬಂಡವಾಳ ತೊಡಗಿಸಿ ಅಭಿವೃದ್ಧಿಗಾಗಿ ಪ್ರಯತ್ನಿಸಲಾಗುತ್ತಿತ್ತು. ಮೂರು ಬಾರಿ ಕೇಂದ್ರ ಸಚಿವರನ್ನು ಕಾರ್ಖಾನೆಗೆ ಭೇಟಿ ಮಾಡಿಸಿದ್ದರೂ ಸಹ ಅಭಿವೃದ್ಧಿಯಾಗಿರಲಿಲ್ಲ. ಇದರಿಂದಾಗಿ ಕೇಂದ್ರ ಸರ್ಕಾರ ಕಾರ್ಖಾನೆಯನ್ನು ಖಾಸಗೀಕರಣಗೊಳಿಸಲು ಯತ್ನಿಸಿ ಜಾಗತಿಕ ಟೆಂಡರ್ ಮೂಲಕ ಖಾಸಗೀಕರಣ ಪ್ರಕ್ರಿಯೆಗೆ ಯತ್ನಿಸಿತ್ತು. ಆದರೆ ಖಾಸಗಿಯವರು ಕಾರ್ಖಾನೆ ಕೊಳ್ಳಲು ಮುಂದೆ ಬರದ ಹಿನ್ನೆಲೆಯಲ್ಲಿ ಖಾಸಗೀಕರಣ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ ಎಂದರು.
ಕಾರ್ಖಾನೆಗೆ ಬಂಡವಾಳ ತೊಡಗಿಸಲು ಸಾಕಷ್ಟು ಬಾರಿ ಪ್ರಯತ್ನ ನಡೆದು ಕೇಂದ್ರ ಸಚಿವರು ಹಾಗೂ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಬಂಡವಾಳ ತೊಡಗಿಸಲು ಯತ್ನಿಸಲಾಗಿತ್ತು. ಆದರೆ, ಈಗ ಕೇಂದ್ರ ಸರ್ಕಾರ ಖಾಸಗೀಕರಣ ಪ್ರಕ್ರಿಯೆಯನ್ನು ಹಿಂಪಡೆದಿದ್ದು, ಎಲ್ಲರೂ ಸೇರಿ ಮುಂದಿನ ದಿನಗಳಲ್ಲಿ ಕಾರ್ಖಾನೆಯ ಅಭಿವೃದ್ಧಿಗಾಗಿ ಚರ್ಚಿಸಿ ಉಳಿಸಿ ಬೆಳೆಸುವ ಪ್ರಯತ್ನ ಮಾಡಲಾಗುವುದು ಹಾಗೂ ಕಾರ್ಖಾನೆಯನ್ನು ಯಶಸ್ವಿ ದಿಕ್ಕಿನತ್ತ ಕೊಂಡೊಯ್ಯಲಾಗುವುದು ಎಂದರು.
ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಕಾರ್ಖಾನೆಯ ಅಭಿವೃದ್ಧಿಗಾಗಿ ಹೆಚ್ಚಿನ ಬಂಡವಾಳ ತೊಡಗಿಸಲು ಕೇಂದ್ರ ಸಚಿವರ ಮೇಲೆ ಒತ್ತಡ ಹೇರಲಾಗುವುದು ಎಂದರು.
ಕಾರ್ಖಾನೆಯ ಕಾರ್ಮಿಕರ ಸಂಘದ ಅಧ್ಯಕ್ಷ ಜಿ. ಜಗದೀಶ್ ಮಾತನಾಡಿ, 2016 ರಿಂದ ಕಾರ್ಖಾನೆಯನ್ನು ಖಾಸಗೀಕರಣಗೊಳಿಸುವ ಪ್ರಯತ್ನ ನಡೆಯುತ್ತಿದೆ. 1918 ರಲ್ಲಿ ಆರಂಭವಾದ ಕಾರ್ಖಾನೆ ವಿಶ್ವವಿಖ್ಯಾತವಾಗಿದ್ದು, ಖಾಸಗಿ ಕಾರ್ಖಾನೆಗಳ ಪೈಪೋಟಿಯಿಂದಾಗಿ ಸ್ಪರ್ಧೆ ನೀಡಲು ಆಗಲಿಲ್ಲ. ಈಗಿರುವ ಯಂತ್ರೋಪಕರಣಗಳು ಹಳೆಯದಾಗಿದ್ದು, ಉತ್ಪಾದನೆ ಸಹ ಕುಂಠಿತವಾಗಿದೆ. ಸಾಕಷ್ಟು ಬಾರಿ ಕೇಂದ್ರ ಸರ್ಕಾರಕ್ಕೆ ಬಂಡವಾಳ ಹೂಡಲು ಮನವಿ ಹಾಗೂ ಹೋರಾಟ ಮಾಡಿದ್ದರೂ ಸಹ ಬಂಡವಾಳ ಹೂಡಿಕೆಯಾಗಿಲ್ಲ. ಇದರಿಂದಾಗಿ ಉತ್ಪಾದನೆ ಕಡಿಮೆಯಾಗುವುದರ ಜೊತೆಗೆ ನಷ್ಟವೂ ಆಗುತ್ತಿದೆ ಎಂದರು.
3 ದಶಕಗಳ ಕಾಲ ವಿಶ್ವವಿಖ್ಯಾತಿ ಪಡೆದು ಉತ್ಪಾದನೆಯಲ್ಲಿ ಪಾರಮ್ಯ ಮೆರೆದಿದ್ದ ಕಾರ್ಖಾನೆ ಒಂದು ಕಾಲದಲ್ಲಿ 12 ಸಾವಿರಕ್ಕೂ ಹೆಚ್ಚು ಕಾಯಂ ಕಾರ್ಮಿಕರು ಮತ್ತು 4 ಸಾವಿರ ಗುತ್ತಿಗೆ ಕಾರ್ಮಿಕರಿಗೆ ಉದ್ಯೋಗ ನೀಡಿತ್ತು. 1980 ರ ನಂತರ 50-60 ವರ್ಷ ಹಳೆಯದಾದ ಯಂತ್ರೋಪಕರಣಗಳು ಮತ್ತು ಹಳೆಯ ತಾಂತ್ರಿಕತೆಯಿಂದಾಗಿ ನಿರಂತರ ನಷ್ಟ ಅನುಭವಿಸುತ್ತಾ ಬಂದ ಪರಿಣಾಮ ರಾಜ್ಯ ಸರ್ಕಾರ ಕಾರ್ಖಾನೆಯನ್ನು ಕೇಂದ್ರ ಸರ್ಕಾರದ ಒಡೆತನದ ಭಾರತೀಯ ಉಕ್ಕು ಪ್ರಾಧಿಕಾರಕ್ಕೆ ಪುಕ್ಕಟೆಯಾಗಿ ವಹಿಸಿಕೊಡಲಾಗಿತ್ತು. ಆದರೆ, ಉಕ್ಕು ಪ್ರಾಧಿಕಾರ ಬಂಡವಾಳ ತೊಡಗಿಸದೇ ಇರುವುದರಿಂದ ಕಾರ್ಖಾನೆ ಇಂದು ನಷ್ಟದಲ್ಲಿದೆ ಎಂದರು.
ಹಲವಾರು ವರ್ಷಗಳಿಂದ ವಾರ್ಷಿಕ 100 ಕೋಟಿ ರೂ. ನಷ್ಟ ಅನುಭವಿಸುತ್ತಿದ್ದ ಕಾರ್ಖಾನೆ ಇತ್ತೀಚಿನ ವರ್ಷಗಳಲ್ಲಿ ಕಾರ್ಮಿಕರ ಪ್ರಯತ್ನದಿಂದಾಗಿ ನಷ್ಟ 35 ಕೋಟಿ ರೂ.ಗೆ ತಲುಪಿದೆ. ಕಾರ್ಖಾನೆಯನ್ನು ಖಾಸಗೀಕರಣ ಮುಂತಾದ ವ್ಯರ್ಥ ಪ್ರಯತ್ನಗಳಲ್ಲಿ ಕಾಲಹರಣ ಮಾಡದೇ ಕೇಂದ್ರ ಸರ್ಕಾರ ಸುಮಾರು ಕನಿಷ್ಠ 2 ಸಾವಿರ ಕೋಟಿ ರೂ. ಬಂಡವಾಳ ತೊಡಗಿಸಿದ್ದಲ್ಲಿ ಮುಂದಿನ ದಿನಗಳಲ್ಲಿ ಕಾರ್ಖಾನೆಯ ಚಿತ್ರಣವೇ ಬದಲಾಗಿ ಮತ್ತೆ ಗತವೈಭವವನ್ನು ಕಾಣಬಹುದಾಗಿದೆ ಎಂದರು.