ಬೆಂಗಳೂರು: ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಪಾದಯಾತ್ರೆ ಕುರಿತು ಕಿಡಿಕಾರಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಸೋನಿಯಾ ಗಾಂಧಿಯವರು ಬಳ್ಳಾರಿಯಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ ಬಳ್ಳಾರಿ ಬಿಟ್ಟು ರಾಯ್ ಬರೇಲಿ ಕ್ಷೇತ್ರಕ್ಕೆ ಹೋದರು. ಸೋನಿಯಾ ಅವರು ಬಳ್ಳಾರಿ ಜನರಿಗೆ ಕೃತಜ್ಞತೆ ಹೇಳಲೂ ಬರಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಬಳ್ಳಾರಿಯಲ್ಲಿ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ನಡೆಯುತ್ತಿದೆ. ಬಳ್ಳಾರಿ ಕ್ಷೇತ್ರದಲ್ಲಿ ನಿಂತಿದ್ದ ಸೋನಿಯಾ ಗಾಂಧಿ ಅಲ್ಲಿನ ಜನತೆಗೆ ಕೃತಜ್ಞತೆ ಹೇಳಲೂ ಬರಲಿಲ್ಲ. ಈಗ ಯಾವ ಮುಖ ಇಟ್ಟುಕೊಂಡು ಅಲ್ಲಿ ಪಾದಯಾತ್ರೆ, ಸಮಾವೇಶ ಮಾಡುತ್ತಿದ್ದಾರೆ? ಇಂದು ದೇಶ ಬಲಿಷ್ಠವಾಗಿ ಒಗ್ಗಟ್ಟಾಗಿದೆ. ಹಾಗಿರುವಾಗ ಇವರ ಜೋಡೋ ಯಾತ್ರೆ ಯಾಕೆ ಬೇಕು? ಎಂದು ಪ್ರಶ್ನಿಸಿದರು.
ಇದೇ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ಸಿದ್ದರಾಮಯ್ಯ ನನಗೆ 4 ಕೀ.ಮೀ ನಡೆದು ತೋರಿಸಲಿ ಎಂದು ಸವಾಲು ಹಾಕಿದ್ದಾರೆ. ಖಂಡಿತ ನಡೆದು ತೋರಿಸೋಣ. ಸಿದ್ದರಾಮಯ್ಯ ನನ್ನ ವೈಯಕ್ತಿಕ ವಿಚಾರದ ಬಗ್ಗೆ ಮಾತನಾಡಿದ್ದಾರೆ. ನಾನು ಸಿದ್ದರಾಮಯ್ಯ ಮಟ್ಟಕ್ಕೆ ಇಳಿಯಲ್ಲ. ಆರೋಗ್ಯ ಚೆನ್ನಾಗಿರಲಿ, 100 ವರ್ಷ ಬಾಳಲಿ ಎಂದು ಹಾರೈಸುತ್ತೇನೆ ಎಂದು ಹೇಳಿದರು.