ಮೊಬೈಲ್ ಇಂದು ಜನ ಜೀವನದ ಅವಿಭಾಜ್ಯ ಅಂಗವಾಗಿದೆ. ಅಲ್ಲದೆ ಟಿವಿ ಇಲ್ಲದ ಮನೆಗಳೇ ಇಲ್ಲ ಎಂಬ ಪರಿಸ್ಥಿತಿ ಇದೆ. ಹೀಗಾಗಿ ಜನ ಮೊಬೈಲ್ ಮತ್ತು ಟಿವಿ ಇಲ್ಲದ ಬದುಕನ್ನು ಕನಸಿನಲ್ಲಿಯೂ ಕಲ್ಪಿಸಿಕೊಳ್ಳಲಾರರು. ಆದರೆ ಇವುಗಳ ಅತಿಯಾದ ಬಳಕೆ ಜೀವನದ ಮೇಲೆ ದುಷ್ಪರಿಣಾಮ ಬೀರುವುದು ಕೂಡಾ ಅಷ್ಟೇ ಸತ್ಯ.
ಕೊರೊನಾ ‘ಲಾಕ್ ಡೌನ್’ ಸಂದರ್ಭದಲ್ಲಿ ಅತಿಹೆಚ್ಚಿನ ಸಂಕಷ್ಟಕ್ಕೆ ಸಿಲುಕಿದ್ದು ಶಿಕ್ಷಣ ವ್ಯವಸ್ಥೆ. ಆ ಸಂದರ್ಭದಲ್ಲಿ ಆನ್ಲೈನ್ ಮೂಲಕ ಶಿಕ್ಷಣ ನೀಡಲಾಗಿದ್ದು, ಹೀಗಾಗಿ ಪುಟ್ಟ ಮಕ್ಕಳ ಕೈಗೂ ಸ್ಮಾರ್ಟ್ಫೋನ್ ಬರುವಂತಾಗಿತ್ತು. ಈಗ ಆಫ್ಲೈನ್ ತರಗತಿಗಳು ಆರಂಭವಾಗಿದ್ದರೂ ಸಹ ಕೆಲವು ವಿದ್ಯಾರ್ಥಿಗಳು ಇನ್ನೂ ಮೊಬೈಲ್ ಗೀಳಿನಿಂದ ಹೊರ ಬರುತ್ತಿಲ್ಲ.
ಹೀಗೆ ತಮ್ಮ ಮಕ್ಕಳು ಮೊಬೈಲ್ ಹಾಗೂ ಟಿವಿ ಗೀಳಿನಿಂದ ಶಿಕ್ಷಣದಲ್ಲಿ ಹಿಂದುಳಿದಿರುವುದನ್ನು ಮನಗಂಡು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆ ಕಡೆಗಾವ್ ತಾಲೂಕಿನ ಮೋಹಿತೆ ವಡಗಾವ್ ಗ್ರಾಮದ ಜನ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ. ಪ್ರತಿನಿತ್ಯ ಎರಡು ಗಂಟೆಗಳ ಕಾಲ ಗ್ರಾಮದಲ್ಲಿ ಯಾರೊಬ್ಬರೂ ಮೊಬೈಲ್ ಹಾಗು ಟಿವಿ ಬಳಕೆ ಮಾಡಬಾರದೆಂದು ಫರ್ಮಾನು ಹೊರಡಿಸಲಾಗಿದ್ದು, ಇದನ್ನು ಎಲ್ಲರೂ ಅಚ್ಚುಕಟ್ಟಾಗಿ ಪರಿಪಾಲಿಸುತ್ತಿದ್ದಾರೆ.