ದೀಪಾವಳಿ ಹಬ್ಬ ಸಮೀಪಿಸುತ್ತಿದ್ದು, ವಾರದ ಆರಂಭದಲ್ಲಿ ಬಂದಿರುವ ಕಾರಣ ಉದ್ಯೋಗಿಗಳು ಶನಿವಾರದಿಂದಲೇ ರಜೆಯ ಮಜಾ ಸವಿಯಲಿದ್ದಾರೆ. ಅಕ್ಟೋಬರ್ 24 ರ ಸೋಮವಾರ ನರಕ ಚತುರ್ದಶಿ, 25 ರ ಮಂಗಳವಾರದಂದು ಅಮಾವಾಸ್ಯೆ ಹಾಗೂ 26ರ ಬುಧವಾರದಂದು ಬಲಿಪಾಡ್ಯಮಿ ಇದೆ.
ಹೀಗೆ ಸಾಲು ಸಾಲು ರಜೆ ಬಂದಿರುವ ಮಧ್ಯೆ ಕಚೇರಿಗೆ ಸ್ಥಳಾವಕಾಶ ಕಲ್ಪಿಸುವ ವೀವರ್ಕ್ ಸಂಸ್ಥೆ, ತನ್ನ ಭಾರತೀಯ ಉದ್ಯೋಗಿಗಳಿಗೆ ದೀಪಾವಳಿ ಸಂದರ್ಭದಲ್ಲಿ ಒಟ್ಟು 10 ದಿನಗಳ ಕಾಲ ರಜೆ ಘೋಷಿಸಿದೆ. ಈ ಮೂಲಕ ಉದ್ಯೋಗಿಗಳ ಮಾನಸಿಕ ಆರೋಗ್ಯ ಯೋಗ ಕ್ಷೇಮಕ್ಕೆ ಕಂಪನಿ ಆದ್ಯತೆ ನೀಡುತ್ತಿದೆ ಎಂದು ತಿಳಿಸಿದೆ.
ಬೆಂಗಳೂರು, ಮುಂಬೈ, ಪುಣೆ ಹಾಗೂ ಹೈದರಾಬಾದ್ ನಲ್ಲಿ ಸಕ್ರಿಯವಾಗಿರುವ ವೀವರ್ಕ್ ಸಂಸ್ಥೆ, ಉದ್ಯೋಗಿಯೇ ಮೊದಲು ಎಂಬ ನೀತಿಯನ್ನು ಅನುಸರಿಸಿಕೊಂಡು ಬಂದಿದ್ದು, 2021 ರಲ್ಲಿ 10 ದಿನಗಳ ಕಾಲ ರಜೆ ನೀಡುವ ಕಾರ್ಯಕ್ರಮವನ್ನು ಆರಂಭಿಸಿತ್ತು. ಇದನ್ನು ಈ ಬಾರಿಯೂ ಮುಂದುವರಿಸಿದೆ.