ಕ್ರಿಕೆಟ್ ಅಭಿಮಾನಿಗಳಿಬ್ಬರು ಮದ್ಯ ಸೇವಿಸಿದ ವೇಳೆ ತಮ್ಮ ತಮ್ಮ ಆಟಗಾರರ ಪರ ವಾಗ್ವಾದ ನಡೆಸಿದ್ದು ಇದು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಓರ್ವ ಐಪಿಎಲ್ ನಲ್ಲಿ ಕೊಹ್ಲಿ ಆಟಗಾರನಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರವಾಗಿ ಮಾತನಾಡಿದ್ದರೆ, ಮತ್ತೊಬ್ಬ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಪರ ಬ್ಯಾಟಿಂಗ್ ಮಾಡಿದ್ದ.
ತಮಿಳುನಾಡಿನ ಅರಿಯಲೂರು ಜಿಲ್ಲೆಯ ಪಯ್ಯೂರು ಗ್ರಾಮದಲ್ಲಿ ಗುರುವಾರ ರಾತ್ರಿ ಈ ಘಟನೆ ನಡೆದಿದ್ದು, 24 ವರ್ಷದ ವಿಜ್ಞೇಶ್ ಎಂಬಾತ ಮೃತಪಟ್ಟಿದ್ದಾನೆ. ಈತನನ್ನು ಸ್ನೇಹಿತ ಧರ್ಮರಾಜು ಬಾಟಲಿಯಿಂದ ಇರಿದು ಕೊಲೆ ಮಾಡಿದ್ದು ಈಗ ಬಂಧನಕ್ಕೆ ಒಳಗಾಗಿದ್ದಾನೆ. ಈ ಇಬ್ಬರು ತಮ್ಮ ಇತರೆ ಸ್ನೇಹಿತರೊಂದಿಗೆ SIDCO ಇಂಡಸ್ಟ್ರಿಯಲ್ ಎಸ್ಟೇಟ್ ನಲ್ಲಿ ಮದ್ಯ ಸೇವಿಸುವ ವೇಳೆ ಆಘಾತಕಾರಿ ಘಟನೆ ನಡೆದಿದೆ.
ವಿಜ್ಞೇಶ್ ಮುಂಬೈ ಇಂಡಿಯನ್ಸ್ ತಂಡದಪರ ವಾದ ಮಾಡಿದ್ದು, ಇದಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿ ಧರ್ಮರಾಜ್ ವಿರೋಧ ವ್ಯಕ್ತಪಡಿಸಿದ್ದಾನೆ. ಧರ್ಮರಾಜ್ ಸ್ವಲ್ಪ ತೊದಲುತ್ತಿದ್ದು, ಇದನ್ನೇ ಮುಂದಿಟ್ಟುಕೊಂಡು ವಿಜ್ಞೇಶ್ ಅಣಕಿಸಿದ್ದಾನೆ. ಇದರಿಂದ ಕೋಪಗೊಂಡ ಧರ್ಮರಾಜ್ ಬಾಟಲಿಯಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ.