ಕೊಲ್ಕತ್ತ: ಕೇಂದ್ರ ಸರ್ಕಾರ ಬಲವಂತವಾಗಿ ಇಡೀ ದೇಶದಲ್ಲಿ ಹಿಂದಿ ಹೇರಿಕೆ ಮಾಡಲು ಹೊರಟಿದೆ. ಈ ವಿಚಾರವನ್ನು ಹಲವಾರು ರಾಜ್ಯದ ಅನೇಕರು ಖಂಡಿಸುತ್ತಾ ಇದ್ದಾರೆ. ಪ್ರಾದೇಶಿಕ ಭಾಷೆಗೆ ಮನ್ನಣೆ ಕೊಡೋದು ಬಿಟ್ಟು ಹಿಂದಿ ಏರಿಕೆ ಸರಿಯಲ್ಲ ಅಂತ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಇದೀಗ ಪಶ್ಚಿಮ ಬಂಗಾಳದಲ್ಲೂ ಇದೇ ರೀತಿ ಹೋರಾಟ ಮುಂದುವರೆದಿದೆ.
ಹೌದು, ಇತ್ತೀಚೆಗೆ ಕೊಲ್ಕತ್ತಾದಲ್ಲಿ ಬಂಗಾಳಿ ಭಾಷಿಕರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ವೇಳೆ ಕುವೆಂಪು ಅವರ ಫೋಟೋ ಹಾಗೂ ಅವರ ಘೋಷಣಾ ಫಲಕಗಳನ್ನು ಹಿಡಿದಿರುವುದು ವಿಶೇಷ ಅನಿಸಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನು ಕುವೆಂಪು ಜೊತೆಗೆ ಪೆರಿಯಾರ್, ಅಣ್ಣಾದೊರೈ, ಕರುಣಾನಿಧಿ ಫೋಟೋಗಳನ್ನು ಹಿಡಿದು ಪ್ರತಿಭಟನೆ ನಡೆಸಿದ್ದಾರೆ.
ಇತ್ತೀಚೆಗೆ ರಾಷ್ಟ್ರಪತಿಯವರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಒಂದು ವರದಿ ನೀಡಿದ್ದರು. ವರದಿಯಲ್ಲಿ ಹಿಂದಿ ಬಗ್ಗೆ ವಿವರಿಸಲಾಗಿದೆ. ಹಿಂದಿ ಬರುವ ನೌಕರರ ನೇಮಕಾತಿ, ಕೇಂದ್ರೀಯ ವಿವಿ ಗಳಲ್ಲಿ ಹಿಂದಿ ಕಡ್ಡಾಯ ಹೀಗೆ ಹಿಂದಿಗೆ ಪ್ರಾಮುಖ್ಯತೆ ನೀಡುವ ವಿಚಾರ ಹೇಳಿದ್ದಾರೆ. ಹೀಗಾಗಿ ದೊಡ್ಡ ಮಟ್ಟದ ವಿರೋಧ ಹಿಂದಿ ಹೇರಿಕೆಗೆ ವ್ಯಕ್ತವಾಗಿದೆ.