ಕಲಬುರ್ಗಿ: ಒಂದೇ ದಿನದಲ್ಲಿ ಅನುಕಂಪದ ನೌಕರಿ ನೀಡುವ ಮೂಲಕ ಕಲಬುರ್ಗಿ ಶಿಕ್ಷಣ ಅಪರ ಆಯುಕ್ತಾಲಯ ಮಹತ್ವದ ಕ್ರಮ ಕೈಗೊಂಡಿದೆ. ಈ ಕುರಿತಾದ ಕಡತ ವಿಳಂಬ ಮಾಡಿದ 7 ಜನ ಡಿಡಿಪಿಐಗಳ ವಾರ್ಷಿಕ ವೇತನ ಬಡ್ತಿ ಕಡಿತಗೊಳಿಸಿ ಬಿಸಿ ಮುಟ್ಟಿಸಲಾಗಿದೆ.
ಮನೆಯಲ್ಲಿ ದುಡಿಯುವ ವ್ಯಕ್ತಿಯನ್ನು ಕಳೆದುಕೊಂಡು ಸಂಕಷ್ಟದಲ್ಲಿರುವ ಕುಟುಂಬದವರು ಅನುಕಂಪದ ನೌಕರಿಗಾಗಿ ಅಲೆದಾಡುವುದನ್ನು ತಪ್ಪಿಸಲು ಮತ್ತು ನೋವು ಅನುಭವಿಸುವುದನ್ನು ತಡೆಯಲು ಕಲಬುರ್ಗಿ ಶಿಕ್ಷಣ ಅಪರ ಆಯುಕ್ತಾಲಯ ಮಹತ್ವದ ಕ್ರಮ ಕೈಗೊಂಡಿದೆ. ಮಾದರಿ ಕಾರ್ಯದ ಮೂಲಕ ಗಮನ ಸೆಳೆದಿದೆ.
ನೌಕರಿ ನೀಡದೆ ಮೃತನ ಕುಟುಂಬದ ವಾರಸುದಾರರಿಗೆ ವಿನಾಕಾರಣ ವಿಳಂಬ ಮಾಡಿದ ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳ ಡಿಡಿಪಿಐ ಸೇರಿದಂತೆ ಹಿರಿಯ ಅಧಿಕಾರಿಗಳ ಒಂದು ವಾರ್ಷಿಕ ಬಡ್ತಿ ಕಡಿತಗೊಳಿಸುವ ಮೂಲಕ ಬಿಸಿ ಮುಟ್ಟಿಸಲಾಗಿದೆ. ಹಿಂದಿನ ಆಯುಕ್ತ ನಳಿನ್ ಅತುಲ್ ಅವಧಿಯಲ್ಲಿ ಕೊರೋನಾ ಸೇರಿದಂತೆ ವಿವಿಧ ಕಾರಣಗಳಿಂದ ಮೃತಪಟ್ಟ ಸಾವಿರಕ್ಕೂ ಅಧಿಕ ಕುಟುಂಬದವರಿಗೆ ಕಾಲಮಿತಿಯೊಳಗೆ ಅನುಕಂಪದ ನೌಕರಿ ನೀಡಲಾಗಿದೆ.
ಈಗಿನ ಆಯುಕ್ತಾರಾದ ಗರಿಮಾ ಪನ್ವಾರ್ ಅವರ ನಾಲ್ಕು ತಿಂಗಳಲ್ಲಿ 149 ಪ್ರಸ್ತಾಪನೆಗಳಲ್ಲಿ 90 ಇತ್ಯರ್ಥ ಪಡಿಸಲಾಗಿದ್ದು, ಬೆಳಿಗ್ಗೆ ಸಲ್ಲಿಕೆಯಾದ ಅರ್ಜಿಗಳಿಗೆ ಸಂಜೆಯೊಳಗೆ ಇತ್ಯರ್ಥಪಡಿಸಿ ನೇಮಕಾತಿ ಆದೇಶ ನೀಡಲಾಗಿದೆ. ಇಲಾಖೆಯಲ್ಲಿ ಖಾಲಿ ಹುದ್ದೆಗಳಿದ್ದರೆ ಇಲಾಖೆಯಲ್ಲಿಯೇ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಇಲ್ಲದಿದ್ದರೆ ಪ್ರಾದೇಶಿಕ ಆಯುಕ್ತರ ಕಚೇರಿಗೆ ಕಡತ ವಿಲೇವಾರಿ ಮಾಡಲಾಗುವುದು. ಪ್ರಸ್ತಾವನೆ ಬಂದ ದಿನವೇ ಎಲ್ಲಾ ಪ್ರಕ್ರಿಯೆ ಪೂರ್ಣಗೊಳಿಸಲಾಗುತ್ತದೆ ಎಂದು ಹೇಳಲಾಗಿದೆ.