ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಪ್ರಕಾರ ಶಾಲಾ ಶಿಕ್ಷಣಕ್ಕೆ ಮಗು ಪ್ರವೇಶ ಪಡೆಯಲು ಆರು ವರ್ಷಗಳು ಪೂರ್ಣಗೊಂಡಿರುವುದು ಕಡ್ಡಾಯ ಎಂದು ತಿಳಿಸಲಾಗಿತ್ತು. ಈಗಾಗಲೇ 23 ರಾಜ್ಯಗಳು ಈ ನಿಯಮವನ್ನು ಅಳವಡಿಸಿಕೊಂಡಿದ್ದು, ಕರ್ನಾಟಕದಲ್ಲೂ ಇದು ಅನುಷ್ಠಾನಕ್ಕೆ ಬರಲಿದೆ ಎಂದು ಹೇಳಲಾಗಿತ್ತು.
ವಯೋಮಿತಿ ಕಾರಣಕ್ಕೆ ಕೆಲ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಲು ಕಷ್ಟ ಪಡುತ್ತಿರುವುದು ಶಿಕ್ಷಣ ಸಚಿವರ ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ 2023 – 24ನೇ ಸಾಲಿನ ಪ್ರವೇಶಕ್ಕೆ ಹಳೆ ನಿಯಮದ ಪ್ರಕಾರವೇ ಮಕ್ಕಳಿಗೆ ಶಾಲಾ ಪ್ರವೇಶ ಕಲ್ಪಿಸಲು ತೀರ್ಮಾನಿಸಲಾಗಿದೆ. ಆರು ವರ್ಷ ವಯೋಮಿತಿ ನಿಯಮವನ್ನು 2025 – 26ರಿಂದ ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ.
ಅಲ್ಲದೆ ಐದು ಮತ್ತು ಎಂಟನೇ ತರಗತಿ ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಪರಿಶೀಲಿಸಲು ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದ್ದು, ಆದರೆ ಪರೀಕ್ಷೆ ಸ್ವರೂಪ ಯಾವ ರೀತಿ ಇರಬೇಕೆಂಬುದರ ಕುರಿತು ಚರ್ಚೆ ನಡೆಯುತ್ತಿದೆ. ಇದು ಪಬ್ಲಿಕ್ ಪರೀಕ್ಷೆ ಅಲ್ಲವೆಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದು, ಸಾಮಾನ್ಯ ಪರೀಕ್ಷೆ ಮಾದರಿಯಲ್ಲಿ ಇದು ನಡೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.