ರಾಮಲೀಲಾ ಸಮಾರಂಭದಲ್ಲಿ ಭಗವಾನ್ ಶಿವನ ಪಾತ್ರವನ್ನು ನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರು ವೇದಿಕೆಯ ಮೇಲೆ ತೀವ್ರ ಹೃದಯ ಸ್ತಂಭನಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ.
ಉತ್ತರ ಪ್ರದೇಶದ ಜೌನ್ಪುರದಲ್ಲಿ ಈ ಘಟನೆ ನಡೆದಿದೆ. ಆ ಘಟನೆಯ ವಿಡಿಯೋವು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದು, ಶಿವನ ವೇಷವನ್ನು ಧರಿಸಿದ್ದ ವ್ಯಕ್ತಿಗೆ ಇನ್ನೊಬ್ಬ ವ್ಯಕ್ತಿ ‘ಆರತಿ’ ಮಾಡುತ್ತಿದ್ದಾಗ ವೇದಿಕೆಯ ಮೇಲೆ ಇದ್ದಕ್ಕಿದ್ದಂತೆ ಕುಸಿದು ಬೀಳುವುದು ಕಾಣಿಸುತ್ತದೆ.
ಅಲ್ಲಿದ್ದವರೆಲ್ಲ ತಕ್ಷಣ ಆತನ ನೆರವಿಗೆ ಬಂದು ಹತ್ತಿರದ ಆಸ್ಪತ್ರೆಗೆ ಸಾಗಿಸಿದರು, ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
ಮೃತ ರಾಮ್ ಪ್ರಸಾದ್ ಎಕೆಎ ಚಬ್ಬನ್ ಪಾಂಡೆ ಆರು ವರ್ಷಗಳಿಂದ ಪಾತ್ರಗಳನ್ನು ನಿರ್ವಹಿಸುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದು, ಪ್ರಸಾದ್ ನಿಧನದ ನಂತರ ರಾಮಲೀಲಾವನ್ನು ನಿಲ್ಲಿಸಲಾಯಿತು.
ಇದೇ ರೀತಿಯ ಘಟನೆ ಇತ್ತೀಚೆಗೆ ನಡೆದಿತ್ತು. ಹನುಮಾನ್ ಮತ್ತು ರಾವಣನ ಪಾತ್ರವನ್ನು ನಿರ್ವಹಿಸುವ ಇಬ್ಬರು ಕಲಾವಿದರು ಕಳೆದ ಹತ್ತು ದಿನಗಳಲ್ಲಿ ರಾಮಲೀಲಾದಲ್ಲಿ ಪ್ರದರ್ಶನ ನೀಡುತ್ತಿರುವಾಗಲೇ ಸಾವನ್ನಪ್ಪಿದ್ದನ್ನು ಇಲ್ಲಿ ಸ್ಮರಿಸಬಹುದು.
ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯ ಸೇಲಂಪುರ ಗ್ರಾಮದಲ್ಲಿ ಹನುಮಂತನ ಪಾತ್ರವನ್ನು ನಿರ್ವಹಿಸುತ್ತಿದ್ದ 50 ವರ್ಷದ ವ್ಯಕ್ತಿಯೊಬ್ಬರು ತಮ್ಮ ಪ್ರದರ್ಶನದ ವೇಳೆ ವೇದಿಕೆಯಲ್ಲೇ ಸಾವನ್ನಪ್ಪಿದ್ದಾರೆ.