ಶಿಕ್ಷಣ ಸಂಸ್ಥೆಯಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಕೋರಿ ಕೆಲ ವಿದ್ಯಾರ್ಥಿನಿಯರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು ಇದರ ವಾದ – ವಿವಾದ ಈಗ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಈ ಕುರಿತ ತೀರ್ಪು ಹೊರಬೀಳಲಿದೆ.
ಈಗಾಗಲೇ ರಾಜ್ಯ ಹೈಕೋರ್ಟ್, ಸರ್ಕಾರದ ಸಮವಸ್ತ್ರ ನೀತಿಯನ್ನು ಎತ್ತಿ ಹಿಡಿದಿದ್ದು, ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಾಗಿತ್ತು. ಇದೀಗ ಇಂದು ಹೊರ ಬೀಳಲಿರುವ ಸುಪ್ರೀಂ ಕೋರ್ಟ್ ತೀರ್ಪು, ಹೈಕೋರ್ಟ್ ಆದೇಶವನ್ನು ಮಾನ್ಯ ಮಾಡುತ್ತಾ ಅಥವಾ ವಿದ್ಯಾರ್ಥಿನಿಯರ ಪರ ತೀರ್ಪು ಹೊರ ಬೀಳುತ್ತಾ ಎಂಬ ಕುತೂಹಲ ಮೂಡಿದೆ.
ಬೆಳಗ್ಗೆ 10:30ಕ್ಕೆ ತೀರ್ಪು ಹೊರ ಬೀಳಲಿದ್ದು, ಇದರ ಬಳಿಕ ಇದು ದೇಶಕ್ಕೆ ಅನ್ವಯವಾಗುವ ಸಾಧ್ಯತೆ ಇದೆ. ಈ ಹಿಂದೆ ಹಿಜಾಬ್ ಕುರಿತು ತೀರ್ಪು ನೀಡಿದ್ದ ಕರ್ನಾಟಕ ಹೈಕೋರ್ಟ್, ಹಿಜಾಬ್ ಧರಿಸುವುದು ಇಸ್ಲಾಂನ ಅತ್ಯಗತ್ಯ ಭಾಗವಲ್ಲ ಎಂದು ಹೇಳಿತ್ತು. ಇದೀಗ ಸುಪ್ರೀಂ ಕೋರ್ಟ್ ತೀರ್ಪಿನತ್ತ ಎಲ್ಲರ ಚಿತ್ತ ನೆಟ್ಟಿದ್ದು, ಈ ಕುತೂಹಲಕ್ಕೆ ಕೆಲ ಗಂಟೆಗಳಲ್ಲೇ ತೆರೆ ಬೀಳಲಿದೆ.