ದೀಪಾವಳಿ ಐದು ದಿನಗಳ ಹಬ್ಬ. ಆದ್ರೆ ಈ ಬಾರಿ ದೀಪಾವಳಿ ಹಾಗೂ ನರಕ ಚತುದರ್ಶಿ ಒಂದೇ ದಿನ ಬಂದಿರುವ ಕಾರಣ ನಾಲ್ಕು ದಿನ ದೀಪಾವಳಿ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ದೀಪಾವಳಿಯಲ್ಲಿ ಧನ ತ್ರಯೋದಶಿಗೂ ಮಹತ್ವವಿದೆ. ಅಂದು ಬಂಗಾರ, ಬೆಳ್ಳಿ ಸೇರಿದಂತೆ ಅನೇಕ ವಸ್ತುಗಳನ್ನು ಖರೀದಿ ಮಾಡಲಾಗುತ್ತದೆ. ಇದ್ರಿಂದ ಶುಭ ಫಲ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ.
ಪ್ರತಿ ವರ್ಷ ಕಾರ್ತಿಕ ಮಾಸದ ಕೃಷ್ಣ ಪಕ್ಷದ ತ್ರಯೋದಶಿಯಂದು ಧನ ತ್ರಯೋದಶಿ ಆಚರಿಸಲಾಗುತ್ತದೆ. ಧನ ತ್ರಯೋದಶಿಯಂದು ಯಾರನ್ನು ಪೂಜೆ ಮಾಡಲಾಗುತ್ತದೆ ಎಂಬುದಕ್ಕೆ ಅನೇಕರಿಗೆ ಉತ್ತರ ತಿಳಿದಿಲ್ಲ. ಧನ ತ್ರಯೋದಶಿ ಭಗವಾನ್ ಧನ್ವಂತರಿಗೆ ಮೀಸಲು. ಧನ್ವಂತರಿ ಇದೇ ದಿನ ಜನಿಸಿದ ಕಾರಣ, ಧನ ತ್ರಯೋದಶಿ ಧನ್ವಂತರಿಗೆ ಮೀಸಲು. ಶಾಸ್ತ್ರಗಳ ಪ್ರಕಾರ, ಧನ್ವಂತರಿಯು ಅಮೃತ ಕಲಶದೊಂದಿಗೆ ಕಾಣಿಸಿಕೊಂಡಿದ್ದಾನೆ. ಧನ್ವಂತರಿ ದೇವರ ಜೊತೆ ಲಕ್ಷ್ಮಿ ಮತ್ತು ಕುಬೇರನನ್ನು ಧನ ತ್ರಯೋದಶಿ ದಿನ ಪೂಜಿಸಲಾಗುತ್ತದೆ.
ಇನ್ನು ಧನ್ವಂತರಿ ಯಾರೆಂದ್ರೆ, ಆತ ಭಗವಂತ ವಿಷ್ಣುವಿನ ಅವತಾರ. ರೋಗಗಳಿಂದ ಧನ್ವಂತರಿ ನಮ್ಮನ್ನು ರಕ್ಷಿಸುತ್ತಾನೆಂದು ನಂಬಲಾಗಿದೆ. ಧನ್ವಂತರಿ ದೇವರಿಗೆ ಪೂಜೆ ಮಾಡುವ ಭಕ್ತರು ಆತನನ್ನು ಒಲಿಸಿಕೊಳ್ಳಲು ಕೆಲ ವಸ್ತುಗಳನ್ನು ಧನ ತ್ರಯೋದಶಿ ದಿನ ಮನೆಗೆ ತರ್ತಾರೆ. ಹಾಗೆ ಕೆಲ ವಸ್ತುಗಳನ್ನು ಅಪ್ಪಿತಪ್ಪಿಯೂ ಧನ ತ್ರಯೋದಶಿ ದಿನ ಮನೆಗೆ ತರಬಾರದು ಎನ್ನಲಾಗುತ್ತದೆ.