ಸ್ಮಶಾನ ಕಾರ್ಮಿಕರ ಮಕ್ಕಳನ್ನು ರಾಜ್ಯದ ಪ್ರತಿಷ್ಠಿತ ಶಾಲೆಗಳಿಗೆ ಪ್ರವೇಶ ಕಲ್ಪಿಸುವ ಯೋಜನೆ ವ್ಯಾಪ್ತಿಗೆ ತರುವುದಾಗಿ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಸ್ಮಶಾನ ಕಾರ್ಮಿಕರಿಗೆ ಸೌಲಭ್ಯ ಒದಗಿಸುವ ಸಂಬಂಧ ವಿಧಾನಸೌಧದಲ್ಲಿಂದು ಸ್ಮಶಾನ ಕಾರ್ಮಿಕರೊಂದಿಗೆ ಸಭೆ ನಡೆಸಿ ಅವರು, ಸಮಾಜ ಕಲ್ಯಾಣ ಇಲಾಖೆ ಯೋಜನೆಯಾಗಿರುವ ದುರ್ಬಲರ ಮಕ್ಕಳನ್ನು ಪ್ರತಿಷ್ಠಿತ ಶಾಲೆಗೆ ಸೇರಿಸುವ ಯೋಜನೆ ವ್ಯಾಪ್ತಿಗೆ ಸ್ಮಶಾನ ಕಾರ್ಮಿಕರ ಮಕ್ಕಳಿಗೆ ಆದ್ಯತೆ ಮೇಲೆ ಪ್ರವೇಶ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಪ್ರತಿಷ್ಠಿತ ಶಾಲೆಗಳಿಗೆ ಮಕ್ಕಳನ್ನು ದಾಖಲಿಸುವ ಯೋಜನೆಯಲ್ಲಿ ಅಲೆಮಾರಿ, ದೇವದಾಸಿಯರ ಮಕ್ಕಳು, ಪೋಷಕರು ಮೃತರಾಗಿ ಅನಾಥರಾದ ಮಕ್ಕಳು, ಅಂಗವಿಕಲರು ಸೇರಿ ವಿವಿಧ 14 ವಿಧದ ಒಂದು ಸಾವಿರ ಮಕ್ಕಳನ್ನು ಪ್ರತಿವರ್ಷ ಓದಿಸುವ ಯೋಜನೆಯಾಗಿದೆ. ಇದೀಗ ಸ್ಮಶಾನ ಕಾರ್ಮಿಕರ ಮಕ್ಕಳಿಗೆ ಆದ್ಯತೆ ನೀಡಿ ಸರ್ಕಾರಿ ಆದೇಶ ಹೊರಡಿಸಲಾಗುವುದು. ಅಲ್ಲದೆ ಪ್ರವೇಶ ಸಂಖ್ಯೆಯನ್ನು 1000 ದಿಂದ 2000ಕ್ಕೆ ಹೆಚ್ಚಿಸಲು ಕ್ರಮ ವಹಿಸಲಾಗುವುದು ಎಂದು ಅವರು ತಿಳಿಸಿದರು.
ಅಲ್ಲದೆ ಬೆಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ವಿವಿಧೆಡೆ ಸ್ಮಶಾನಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರನ್ನು ಖಾಯಂ ಮಾಡುವ, ಅವರಿಗೆ ನಿವೇಶನ, ಮನೆ, ಆರೋಗ್ಯ ಕಾರ್ಡು ವಿತರಣೆ, ಗುರುತಿನ ಚೀಟಿ ವಿತರಣೆ, ಕನಿಷ್ಠ ವೇತನ ನಿಗದಿ ಸೇರಿದಂತೆ ವಿವಿಧ ಸೌಲಭ್ಯಗಳನ್ನು ವಿತರಿಸಲು ಕ್ರಮ ವಹಿಸಲಾಗುವುದು. ಈ ಸಂಬಂಧ ಬೆಂಗಳೂರು ಮಹಾನಗರ ಪಾಲಿಕೆಗೆ ಪತ್ರ ಬರೆಯಲಾಗುವುದು ಹಾಗೂ ಪ್ರತಿ ಗ್ರಾಮ ಪಂಚಾಯ್ತಿ, ಪಟ್ಟಣ ಪಂಚಾಯ್ತಿ, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆಗಳಲ್ಲಿ ಸ್ಮಶಾನಗಳ ಮಾಹಿತಿ ಹಾಗೂ ಸ್ಮಶಾನಕ್ಕೊಬ್ಬ ಕಾರ್ಮಿಕರನ್ನು ನೇಮಿಸಿಕೊಳ್ಳುವ ಸಂಬಂಧ ಪಂಚಾಯತ್ ರಾಜ್ ಹಾಗೂ ನಗರಾಭಿವೃದ್ಧಿ ಇಲಾಖೆಯೊಂದಿಗೆ ಚರ್ಚಿಸಿ ಕ್ರಮ ವಹಿಸಲಾಗುವುದು ಎಂದು ಸಚಿವರು ವಿವರಿಸಿದರು.
ಸಭೆಯಲ್ಲಿ, ಸ್ಮಶಾನ ಕಾರ್ಮಿಕರ ಸಂಘಧ ಪದಾಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆ ಸಲಹೆಗಾರರಾದ ಡಾ. ಇ. ವೆಂಕಟಯ್ಯ, ಇಲಾಖೆ ಕಾರ್ಯದರ್ಶಿ ಮೇಜರ್.ಪಿ.ಮಣಿವಣ್ಣನ್, ಅಯುಕ್ತ ಡಾ. ಕೆ. ರಾಕೇಶ್ ಕುಮಾರ್, ಅಲೆಮಾರಿ ಕೋಶದ ವಿಶೇಷಾಧಿಕಾರಿ ಡಾ. ಜಿ.ಪಿ.ದೇವರಾಜ್ ಮತ್ತಿತರರು ಉಪಸ್ಥಿತರಿದ್ದರು.