ಮಂಗಳವಾರದಂದು ನಡೆದ ಬಿಜೆಪಿ ಜನಸಂಕಲ್ಪ ಯಾತ್ರೆ ವೇಳೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು, ರಾಹುಲ್ ಗಾಂಧಿಯವರನ್ನು ಬಚ್ಚಾ ಎಂದಿದ್ದರಲ್ಲದೆ ಸಿದ್ದರಾಮಯ್ಯನವರ ಅಧಿಕಾರಾವಧಿಯಲ್ಲಿ ನಡೆದ ಹಗರಣಗಳನ್ನು ತನಿಖೆ ನಡೆಸುತ್ತೇವೆ ಎಂದು ಗುಡುಗಿದ್ದರು.
ಹೊಸಪೇಟೆಯಲ್ಲಿ ನಡೆಯುತ್ತಿರುವ ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜಾಹುಲಿ ಯಾರಿಗೂ ಬಗ್ಗಲ್ಲ ಜಗ್ಗಲ್ಲ, ಅವರು ನಿನ್ನೆ ಹೇಳಿರುವ ಮಾತಿನಿಂದ ಕಾಂಗ್ರೆಸ್ ನಾಯಕರು ತತ್ತರಿಸಿ ಹೋಗಿದ್ದಾರೆ ಎಂದು ಹೇಳಿದ್ದಾರೆ.
ತಮ್ಮ ಭಾಷಣದುದ್ದಕ್ಕೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಹಾಡಿ ಹೊಗಳಿಂದ ಬಸವರಾಜ ಬೊಮ್ಮಾಯಿ, ತಮ್ಮ ಹೋರಾಟದ ಕಾರಣಕ್ಕೆ ಯಡಿಯೂರಪ್ಪನವರು ಇಂದಿಗೂ ಜನನಾಯಕರಾಗಿದ್ದಾರೆ. ಕರ್ನಾಟಕದಲ್ಲಿ ಧೀಮಂತ ನಾಯಕರು ಯಾರಾದರೂ ಇದ್ದಾರೆ ಎಂದರೆ ಅದು ಯಡಿಯೂರಪ್ಪನವರು ಎಂದು ಹೇಳಿದ್ದಾರೆ.