ಮುಂಬೈ: ಮುಂಬರುವ ಅಂಧೇರಿ ಪೂರ್ವ ವಿಧಾನಸಭಾ ಉಪಚುನಾವಣೆಗೆ ಚುನಾವಣಾ ಆಯೋಗ ಸೋಮವಾರ ಠಾಕ್ರೆ ನೇತೃತ್ವದ ಬಣಕ್ಕೆ ‘ಶಿವಸೇನೆ(ಉದ್ಧವ್ ಬಾಳಾಸಾಹೇಬ್ ಠಾಕ್ರೆ)’ ಮತ್ತು ಏಕನಾಥ್ ಶಿಂಧೆ ಬಣ ‘ಬಾಳಾಸಾಹೆಬಂಚಿ ಶಿವಸೇನೆ’ ಹೆಸರನ್ನು ನಿಗದಿಪಡಿಸಿದೆ.
ಚುನಾವಣಾ ಆಯೋಗ ಠಾಕ್ರೆ ನೇತೃತ್ವದ ಶಿವಸೇನೆಗೆ ಪಕ್ಷದ ಚಿಹ್ನೆಯಾಗಿ ಜ್ವಲಂತ ಜ್ಯೋತಿ(flaming torch)ಯನ್ನು ನೀಡಿತು. ಶಿಂಧೆ ಬಣಕ್ಕೆ ಪಕ್ಷದ ಚಿಹ್ನೆಯನ್ನು ನೀಡದೆ, ಹೊಸದಾಗಿ ಚಿಹ್ನೆಗಳ ಪಟ್ಟಿಯನ್ನು ನೀಡುವಂತೆ ತಿಳಿಸಲಾಗಿದೆ.
ಹಿಂದಿನ ದಿನ, ಠಾಕ್ರೆ ನೇತೃತ್ವದ ಶಿವಸೇನೆ ಬಣವು ಪಕ್ಷದ ಹೆಸರು ಮತ್ತು ಚುನಾವಣಾ ಚಿಹ್ನೆಯನ್ನು ಸ್ಥಗಿತಗೊಳಿಸುವ ಭಾರತೀಯ ಚುನಾವಣಾ ಆಯೋಗದ(ಇಸಿಐ) ಆದೇಶವನ್ನು ರದ್ದುಗೊಳಿಸುವಂತೆ ಕೋರಿ ದೆಹಲಿ ಹೈಕೋರ್ಟ್ ಮೊರೆ ಹೋಗಿತ್ತು.
ಮಹಾರಾಷ್ಟ್ರದಲ್ಲಿ ಮುಂಬರುವ ಉಪಚುನಾವಣೆಯ ದೃಷ್ಟಿಯಿಂದ EC, ಶಿವಸೇನೆಯ ‘ಬಿಲ್ಲು ಮತ್ತು ಬಾಣ’ ಚಿಹ್ನೆಯನ್ನು ಫ್ರೀಜ್ ಮಾಡಿತ್ತು. ಠಾಕ್ರೆ ಅವರ ಬಣ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಬಣವನ್ನು ಪಕ್ಷದ ಚಿಹ್ನೆ ಬಳಸದಂತೆ ನಿರ್ಬಂಧಿಸಿದೆ.