ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಇಹಲೋಕ ತ್ಯಜಿಸಿದ್ದಾರೆ. ಉತ್ತರ ಪ್ರದೇಶದ ಮಾಜಿ ಸಿಎಂ ನಿಧನದಿಂದ ಸಮಾಜವಾದಿ ಪಕ್ಷ ಶೋಕ ಸಾಗರದಲ್ಲಿ ಮುಳುಗಿದೆ. 82ನೇ ವಯಸ್ಸಿನಲ್ಲಿ ನಿಧನರಾಗಿರುವ ಮುಲಾಯಂ, ಬಹುದೊಡ್ಡ ರಾಜಕೀಯ ಪರಂಪರೆಯ ಜೊತೆಗೆ ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಬಿಟ್ಟು ಹೋಗಿದ್ದಾರೆ. 2019ರ ವೇಳೆಗೆ ಮುಲಾಯಂ ಸಿಂಗ್ ಯಾದವ್ ಅವರ ಆಸ್ತಿ ಮೌಲ್ಯ 20 ಕೋಟಿ ದಾಟಿತ್ತು.
2019ರ ಲೋಕಸಭೆ ಚುನಾವಣೆ ವೇಳೆ ಮುಲಾಯಂ ಸಿಂಗ್ ಯಾದವ್ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ಅವರ ಆಸ್ತಿ ಬಗ್ಗೆ ಮಾಹಿತಿ ನೀಡಲಾಗಿತ್ತು. ಅವರ ಆಸ್ತಿ ಸುಮಾರು 16.5 ಕೋಟಿ ರೂಪಾಯಿ. ಈ ಸ್ಥಿರಾಸ್ತಿ ಜತೆಗೆ ಪತ್ನಿ ಸಾಧನಾ ಯಾದವ್ ಅವರ ವಾರ್ಷಿಕ ಆದಾಯ 32.02 ಲಕ್ಷ ರೂಪಾಯಿ ಎಂದು ನಮೂದಿಸಿದ್ದರು. ಯಾದವ್ ಅವರ ಬಳಿ ಎರಡು ಕೋಟಿಗಿಂತ ಹೆಚ್ಚು ಮೌಲ್ಯದ ಚರಾಸ್ಥಿಯಿತ್ತು.
2017-18 ರ ಆರ್ಥಿಕ ವರ್ಷದಲ್ಲಿ ಅವರ ಆದಾಯ 32,02,615 ರೂಪಾಯಿ ಆಗಿದ್ದರೆ, 2016-2017ರಲ್ಲಿ 31,87,656 ರೂಪಾಯಿ ಇತ್ತು. ಮುಲಾಯಂ ಸಿಂಗ್ ಯಾದವ್ ಬಳಿ 16,75,416 ರೂಪಾಯಿ ನಗದು ಇರುವುದಾಗಿ ನಮೂದಿಸಲಾಗಿತ್ತು. ಹಣಕಾಸು ಸಂಸ್ಥೆಗಳು ಮತ್ತು ಎನ್‌ಬಿಎಫ್‌ಸಿಗಳಲ್ಲಿ 40,13,928 ರೂಪಾಯಿಯಿತ್ತು. ಅವರು ಒಟ್ಟು 9,52,298 ರೂ ಮೌಲ್ಯದ ಎಲ್ಐಸಿ ಮತ್ತು ಇತರ ವಿಮಾ ಪಾಲಿಸಿಗಳನ್ನು ಹೊಂದಿದ್ದರು. ಅವರ ಬಳಿ ಒಟ್ಟು 7.50 ಕೆಜಿ ಚಿನ್ನವಿತ್ತು, ಇದರ ಮೌಲ್ಯ 2,41,52,365 ರೂಪಾಯಿ.
ಇಟಾವಾ ಮತ್ತು ಇತರೆಡೆ 7,89,88,000 ಮೌಲ್ಯದ ಕೃಷಿ ಭೂಮಿ ಹೊಂದಿದ್ದರು. ಕೃಷಿಯೇತರ ಭೂಮಿಯಲ್ಲಿ 1,44,60,000 ರೂಪಾಯಿ ಮೌಲ್ಯದ ಆಸ್ತಿ ಸಹ ಸೇರಿದೆ. ಉತ್ತರ ಪ್ರದೇಶದಲ್ಲಿ ಅವರ ವಸತಿಯ ಬೆಲೆ 6,83,84,566 ರೂಪಾಯಿ. ಅಫಿಡವಿಟ್‌ನಲ್ಲಿ ಮುಲಾಯಂ ಸಿಂಗ್ ಯಾದವ್ ಅವರ ಬಳಿ ಯಾವುದೇ ಕಾರು ಇಲ್ಲವೆಂದು ತಿಳಿಸಲಾಗಿದೆ. ಅವರು ತಮ್ಮ ಮಗ ಅಖಿಲೇಶ್ ಯಾದವ್ ಅವರಿಂದ 2,13,80,000 ರೂಪಾಯಿ ಸಾಲವನ್ನೂ ಪಡೆದಿದ್ದಾರೆ.ಮುಲಾಯಂ ಸಿಂಗ್ ಯಾದವ್ ಜನಿಸಿದ್ದು 1939ರ ನವೆಂಬರ್ 22 ರಂದು. ಉತ್ತರ ಪ್ರದೇಶದ ಇಟಾವಾ ಜಿಲ್ಲೆಯ ಸೈಫೈ ಗ್ರಾಮದ ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದವರು. ಮುಲಾಯಂ ಸಿಂಗ್ ಯಾದವ್ ರಾಜಕೀಯಕ್ಕೆ ಸೇರುವ ಮೊದಲು ಶಿಕ್ಷಕರಾಗಿದ್ದರು.