ಬೆಳಕಿನ ಹಬ್ಬ ದೀಪಾವಳಿಗೆ ಸಿದ್ದತೆ ಜೋರಾಗಿದೆ. ಹಬ್ಬದ ದಿನವಾದ ಇಂದು ಸಡಗರ ಸಂಭ್ರಮದ ವಾತಾವರಣ ಎಲ್ಲೆಡೆ ಕಂಡುಬಂದಿದೆ.
ಈಗಾಗಲೇ ಮಾರುಕಟ್ಟೆಯಲ್ಲಿ ಜನಜಂಗುಳಿ ಕಂಡುಬರತೊಡಗಿದ್ದು, ಅಗತ್ಯ ವಸ್ತು, ದಿನಸಿ, ಪಟಾಕಿ, ಹೊಸ ಬಟ್ಟೆ ಖರೀದಿಯಲ್ಲಿ ಜನರು ನಿರತರಾಗಿದ್ದಾರೆ. ಗ್ರಾಮೀಣ ಭಾಗದಲ್ಲಿ ಅತ್ಯಂತ ಸಡಗರದಿಂದ ರೈತರು ದೀಪಾವಳಿಯನ್ನು ಆಚರಿಸಲು ಅಣಿಯಾಗಿದ್ದಾರೆ.
ದೀಪಾವಳಿ ಹಬ್ಬದ ಪ್ರಮುಖ ಆಕರ್ಷಣೆಯಾದ ದೀಪ ಹಾಗೂ ಪಟಾಕಿ ಖರೀದಿಯಲ್ಲಿ ಗ್ರಾಹಕರು ತಲ್ಲೀನರಾಗಿದ್ದಾರೆ. ವಿವಿಧ ಮಾದರಿಯ ಅತ್ಯಾಕರ್ಷಕ ಮಣ್ಣಿನ ಹಾಗೂ ಪಿಂಗಾಣಿ ಹಣತೆ ಮಾರುಕಟ್ಟೆಯಲ್ಲಿ ಲಭ್ಯವಿವೆ.
ಹಬ್ಬದ ಮತ್ತೊಂದು ಆಕರ್ಷಣೆ ಎಂದರೆ ವಿಧವಿಧವಾದ ಪಟಾಕಿ. ಪಟಾಕಿ ಖರೀದಿ ಜೋರಾಗಿ ನಡೆದಿದೆ. ಪಟಾಕಿ ಬೆಲೆ ಈ ಬಾರಿ ಹಿಂದಿಗಿಂತ ಹೆಚ್ಚಾಗಿದ್ದರೂ ಖರೀದಿ ಮಾತ್ರ ಎಂದಿನಂತೆ ಬಲು ಜೋರಾಗಿಯೇ ನಡೆದಿದೆ. 300 ರೂ. ಗಳಿಂದ 10 ಸಾವಿರ ರೂ. ಗಳ ವರೆಗಿನ ಗಿಫ್ಟ್ ಪ್ಯಾಕ್ ಗಳಲ್ಲಿ ಪಟಾಕಿ ಮಾರಾಟವಾಗುತ್ತಿದೆ.
ಹಬ್ಬದ ಅಂಗವಾಗಿ ಮಾರುಕಟ್ಟೆಯಲ್ಲಿ ಹಣ್ಣು-ಹಂಪಲು ಮತ್ತು ಹೂವುಗಳ ಬೆಲೆ ಹೆಚ್ಚಾಗಿದೆ. ಹೂವಿನ ಬೆಲೆ ಗಗನಕ್ಕೆ ಏರಿದೆ. ಮಲ್ಲಿಗೆ, ಕನಕಾಂಬರ, ಸೇವಂತಿಗೆ ಸೇರಿದಂತೆ ವಿವಿಧ ಹೂವಿನ ಬೆಲೆ ಹೆಚ್ಚಳವಾಗಿದ್ದರೂ ಗ್ರಾಹಕರು ಖರೀದಿಯಲ್ಲಿ ತೊಡಗಿದ್ದಾರೆ. ದೀಪಾವಳಿಗೆ ವಿಶೇಷವೆಂದರೆ ಚೆಂಡು ಹೂ. ವಿವಿಧ ಬಣ್ಣದ ಚೆಂಡು ಹೂಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ.
ಹಬ್ಬದಲ್ಲೂ ದಿನಸಿ ವಸ್ತುಗಳ ಬೆಲೆ ಕಡಿಮೆಯಾಗಿಲ್ಲ. ಅನೇಕ ಗೃಹೋಪಯೋಗಿ ಅಂಗಡಿಗಳಲ್ಲಿ ಆಕರ್ಷಕ ಬೆಲೆಯ ಆಫರ್ ನೀಡುವ ಮೂಲಕ ಗ್ರಾಹಕರನ್ನು ಸೆಳೆಯುವ ಪ್ರಯತ್ನ ಸಾಗಿದೆ.
ಮಾರುಕಟ್ಟೆಗೆ ವಿವಿಧ ರೀತಿಯ ಆಕರ್ಷಕ ವಿನ್ಯಾಸದ ಆಕಾಶ ಬುಟ್ಟಿಗಳ ವ್ಯಾಪಾರ ಬಲು ಜೋರಾಗಿದೆ. ಬಗೆಬಗೆಯ ಹಾಗೂ ವಿವಿಧ ರೀತಿಯ ಆಕಾಶ ಬುಟ್ಟಿಗಳು ಕಣ್ಮನ ಸೆಳೆಯತೊಡಗಿವೆ. ದೀಪಾವಳಿಗೆ ಮನೆಯ ಮುಂದೆ ಹಾಕಲು ಬಣ್ಣದ ರಂಗೋಲಿ ಪುಡಿ ಖರೀದಿ ಜೋರಾಗಿದೆ.