ಬೆಂಗಳೂರು: ಖಾಸಗಿ ವೈದ್ಯ ಮತ್ತು ದಂತ ವೈದ್ಯಕೀಯ ಕಾಲೇಜುಗಳು, ವಿವಿಗಳಲ್ಲಿನ ಸೀಟುಗಳ ಶುಲ್ಕ ಹೆಚ್ಚಳವಾಗುವ ಆತಂಕದಲ್ಲಿದ್ದ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಸಿಹಿ ಸುದ್ದಿ ನೀಡಲಾಗಿದೆ.
ಮೆಡಿಕಲ್ ಮತ್ತು ಡೆಂಟಲ್ ಕಾಲೇಜುಗಳ ಶುಲ್ಕ ಹೆಚ್ಚಳಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಪ್ಪಿಲ್ಲ. ಸರ್ಕಾರ ಶುಲ್ಕ ಹೆಚ್ಚಳಕ್ಕೆ ನಿರಾಕರಿಸಿದ್ದು, ಕಳೆದ ವರ್ಷದ ಶುಲ್ಕವೆ ಮುಂದುವರೆಯಲಿದೆ. ಎಂಟು ಧಾರ್ಮಿಕ ಅಲ್ಪಸಂಖ್ಯಾತ ಮತ್ತು ಭಾಷಾ ಅಲ್ಪಸಂಖ್ಯಾತ ಮೆಡಿಕಲ್ ಕಾಲೇಜುಗಳ ಖಾಸಗಿ ಕೋಟಾ ಸೀಟುಗಳ ಶುಲ್ಕ ಶೇಕಡ 10 ರಷ್ಟು ಮಾತ್ರ ಹೆಚ್ಚಿಸಲು ಸರ್ಕಾರ ಒಪ್ಪಿಗೆ ನೀಡಿದೆ. ಉಳಿದಂತೆ ಈ ಕಾಲೇಜುಗಳ ಸರ್ಕಾರಿ ಕೋಟಾ ಸೀಟುಗಳ ಶುಲ್ಕ ಏರಿಕೆಯಾಗುವುದಿಲ್ಲ.
ಚುನಾವಣೆ ವರ್ಷವಾಗಿರುವುದರಿಂದ ಶುಲ್ಕ ಹೆಚ್ಚಳಕ್ಕೆ ಸರ್ಕಾರ ಒಪ್ಪಿಲ್ಲ. ಖಾಸಗಿ ಕಾಲೇಜುಗಳು ಶೇಕಡ 15 ರಷ್ಟು ಶುಲ್ಕ ಹೆಚ್ಚಳಕ್ಕೆ ಬೇಡಿಕೆ ಇಟ್ಟಿದ್ದು, ಶೇಕಡ 10 ರಷ್ಟು ಹೆಚ್ಚಳ ಮಾಡಲು ಪಟ್ಟು ಹಿಡಿದಿದ್ದವು. ಆದರೆ, ಇಲಾಖೆ ಮಟ್ಟದಲ್ಲಿ ಶುಲ್ಕ ಹೆಚ್ಚಳಕ್ಕೆ ಭರವಸೆ ಸಿಕ್ಕಿದ್ದರೂ ಸಿಎಂ ಬಸವರಾಜ ಬೊಮ್ಮಾಯಿ ಒಪ್ಪಿಗೆ ಸೂಚಿಸಿಲ್ಲ ಎನ್ನಲಾಗಿದೆ.