ನವದೆಹಲಿ: ಚೆಕ್ ಬೌನ್ಸ್ ಆದರೆ ಖಾತೆಯನ್ನೇ ಬಂದ್ ಮಾಡಲಾಗುವುದು. ಬೇರೆ ಖಾತೆಯಿಂದ ಹಣ ವಸೂಲಿ ಮಾಡಲಾಗುವುದು. ಅಲ್ಲದೆ, ಹೊಸ ಖಾತೆಗಳನ್ನು ತೆರೆಯಲು ನಿಷೇಧಿಸಲಾಗುವುದು. ಇಂತಹ ಅನೇಕ ಕ್ರಮಗಳನ್ನು ಒಳಗೊಂಡ ನಿಯಮಗಳನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ.
ಉನ್ನತ ಮಟ್ಟದ ಸಮಿತಿಯಿಂದ ಕೇಂದ್ರ ಹಣಕಾಸು ಸಚಿವಾಲಯಕ್ಕೆ ಈ ಕುರಿತಾಗಿ ಪ್ರಸ್ತಾವನೆ ಸಲ್ಲಿಸಿದೆ. ಚೆಕ್ ನೀಡಿದ ವ್ಯಕ್ತಿಯ ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲದೆ ಅದು ಅಮಾನ್ಯವಾದರೆ ಆತನ ಇನ್ನೊಂದು ಬ್ಯಾಂಕ್ ಖಾತೆಯಿಂದ ಹಣ ಕಡಿತಗೊಳಿಸಿ ಪಾವತಿಸಲಾಗುತ್ತದೆ.
ಚೆಕ್ ಸಾಮಾನ್ಯವಾದಲ್ಲಿ ಅದನ್ನು ಸಾಲ ಮರುಪಾವತಿಗೆ ವಿಫಲವೆಂದು ಪರಿಗಣಿಸಲಾಗುತ್ತದೆ. ಈ ಮಾಹಿತಿಯನ್ನು ರೇಟಿಂಗ್ ಏಜೆನ್ಸಿಗೆ ನೀಡಿ ಅವರ ಕ್ರೆಡಿಟ್ ರೇಟಿಂಗ್ ಕಡಿಮೆಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಚೆಕ್ ಅಮಾನ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಈ ನಿಯಮ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿದೆ.
ಚಿಕ್ ಅಮಾನ್ಯ ಪ್ರಕರಣಗಳನ್ನು ತ್ವರಿತವಾಗಿ ನಿಭಾಯಿಸಲು ಕಾಯ್ದೆಯಲ್ಲಿ ಬದಲಾವಣೆ ತರಲು ಮುಂದಾಗಿದೆ. ಚಿಕ್ ಅಮಾನ್ಯ ಪ್ರಕರಣದ ಸುಮಾರು 35 ಲಕ್ಷ ಕೇಸ್ ಗಳು ಬಾಕಿ ಇದೆ. ಹೀಗಾಗಿ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಈ ಕುರಿತು ಸಲಹೆ ನೀಡಲಾಗಿದೆ. ಚೆಕ್ ನೀಡಿದವರು ಬೇರೆ ಖಾತೆ ತೆರೆಯಲು ತಡೆ ನೀಡಲಿದ್ದು, ಸುಸ್ತಿದಾರ ಎಂದು ಘೋಷಿಸಲಾಗುತ್ತದೆ. ಕ್ರೆಡಿಟ್ ಸ್ಕೋರ್ ಕಡಿತವಾಗಲಿದ್ದು, ಹಣ ವಿತ್ ಡ್ರಾ ತಡೆಗೆ ನಿರ್ಬಂಧ ವಿಧಿಸಲಾಗುವುದು.