ಲಾಕ್‌ಡೌನ್ ಸಮಯದಲ್ಲಿ ನಾವೆಲ್ಲ ಅನುಭವಿಸಿರುವ ಸಮಸ್ಯೆಗಳು ಒಂದೆರಡಲ್ಲ. ಅದರಲ್ಲೂ ಪ್ರಾಣಿಗಳು ಒಂದು ಹೊತ್ತಿನ ಊಟ ಸಿಗದೆಯೇ ಹಸಿವೆಯಿಂದ ಒದ್ದಾಡಿ ಸತ್ತೇ ಹೋಗಿದ್ದವು. ಆದರೆ ಪ್ರಾಣಿಗಳ ಕಷ್ಟವನ್ನ ಅರಿತ ಕೆಲವರು, ಆ ಸಮಯದಲ್ಲೂ ಪ್ರಾಣಿಗಳ ಕಷ್ಟ ನೋಡೋಕ್ಕಾಗದೇ ತಮ್ಮಿಂದಾದಷ್ಟು ಸಹಾಯ ಮಾಡಿದ್ದಾರೆ.
ಎಲ್ಲೆಲ್ಲಿ ಬೀದಿನಾಯಿ, ಇಲ್ಲಾ ಬೇರೆ ಪ್ರಾಣಿಗಳೇನಾದರೂ ಕಾಣಿಸಿದಾಗೆಲ್ಲ ಅವುಗಳಿಗೆ ಏನಾದರೂ ತಿನ್ನುವುದಕ್ಕೆ ಕೊಟ್ಟಿದ್ದಾರೆ. ಅದೇ ರೀತಿ ಮುಂಬೈನ ನಿವಾಸಿಯಾಗಿರುವ ಪ್ರಿಯಾಂಕಾ ಚೌಬಾಲ್ ಕೂಡಾ, ಕೊರೊನಾ ಸಮಯದಲ್ಲಿ ತಮ್ಮ ಬೀದಿಯಲ್ಲಿ ಸದಾ ಕಾಣಿಸಿಕೊಳ್ಳುತ್ತಿದ್ದ ನಾಯಿಗೆ ಆಹಾರ ಕೊಟ್ಟಿದ್ದಾರೆ. ಅದೇ ಶ್ವಾನದ ಭೇಟಿ ಈಗ ಆಗಿದ್ದು, ಅವರು ಪ್ರೀತಿಯ ಭೇಟಿಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅಸಲಿಗೆ ಅದು ಪ್ರಿಯಾಂಕಾ ಬೆಳ್ಳಂಬೆಳಿಗ್ಗೆ ಮುಂಬೈನ ಅಂಧೇರಿಯಿಂದ ಕಚೇರಿಗೆ ಹೊರಟಿದ್ದ ಸಮಯ. ತಡವಾಗಿದ್ದರಿಂದ ಬಸ್ ಮಿಸ್ ಆಗಿ ಹೋಗಿತ್ತು. ಆದ್ದರಿಂದ ಅಲ್ಲೇ ಇದ್ದ ಪೆಂಡಾಲ್‌ಗೆ ಹೋಗಿ ದೇವಿ ಆಶೀರ್ವಾದ ಪಡೆಯಲು ಹೋಗಿದ್ದಾರೆ. ದೇವಿ ದರ್ಶನ ಪಡೆದು ಹೊರ ಬಂದ ಪ್ರಿಯಾಂಕಾ ಅವರಿಗೆ ಶಾಕ್ ಆಗಿತ್ತು. ಕೊರೊನಾ ಸಮಯದಲ್ಲಿ ತಾವು ಯಾವ ಶ್ವಾನಕ್ಕೆ ಊಟ ಹಾಕುತ್ತಿದ್ದರೋ ಆ ಶ್ವಾನ ಮತ್ತೆ ಅವರ ಕಣ್ಮುಂದೆ ಇತ್ತು. ಆ ಶ್ವಾನ ಪ್ರಿಯಾಂಕಾ ಅವರನ್ನ ಕಂಡಾಕ್ಷಣ ಅದು ತನ್ನ ಪ್ರೀತಿಯನ್ನ ವ್ಯಕ್ತಪಡಿಸಿತ್ತು. ಬಾಲ ಅಲ್ಲಾಡಿಸುತ್ತಾ ಅದು ತಲೆ ತಗ್ಗಿಸಿತ್ತು.
ಪ್ರಿಯಾಂಕಾ ಶ್ವಾನ ತೋರಿದ ಪ್ರೀತಿಗೆ ಭಾವುಕರಾಗಿದ್ದರು. ತಮ್ಮ ಭೇಟಿಯ ಅದ್ಭುತ ಘಳಿಗೆಯನ್ನ ತಮ್ಮ ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಕೊಂಡು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನೆಟ್ಟಿಗರು ಈ ವಿಡಿಯೋ ನೋಡಿ ಮೂಕ ಪ್ರಾಣಿಯ, ಪ್ರೀತಿ ಮತ್ತು ಅದರ ರೀತಿ ನೋಡಿ ಮೂಕವಿಸ್ಮಿತರಾಗಿದ್ದಾರೆ. ಪ್ರಾಣಿ ಎಂದು ಕಡೆಗಣಿಸದೇ ಪ್ರೀತಿ ತೋರಿ ಎಂದು ಕೆಲವರು ಕಾಮೆಂಟ್ ಮಾಡಿದ್ರೆ, ಇನ್ನು ಕೆಲವರು ಮನುಷ್ಯರಿಗಿಂತ ಪ್ರಾಣಿಗಳೇ ಉತ್ತಮ ಎಂದು ಹೇಳಿದ್ದಾರೆ.