ಬೆಂಗಳೂರು: ಪರಿಶಿಷ್ಟ ಜಾತಿ ಪಂಗಡದ ಮೀಸಲಾತಿ ಹೆಚ್ಚಳ ಮಾಡಿದ ಬಿಜೆಪಿ ಸರ್ಕಾರ ಈಗ ಒಳ ಮೀಸಲಾತಿ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ. ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಬೇಡಿಕೆ ಈಡೇರಿಕೆಗೆ ಕ್ರಮ ಕೈಗೊಳ್ಳಲಾಗಿದ್ದು, ವರದಿ ಸಲ್ಲಿಸಲು ಕಾನೂನು ಸಚಿವರ ನೇತೃತ್ವದ ಸಮಿತಿ ರಚಿಸಲಾಗಿದೆ.
ಸದಾಶಿವ ಆಯೋಗದ ಶಿಫಾರಸ್ಸು ಜಾರಿಗೆ ಚಿಂತನೆ ನಡೆದಿದ್ದು, 25 ವರ್ಷಗಳ ಬೇಡಿಕೆಗೆ ಸ್ಪಂದಿಸಲಾಗಿದೆ. ಪರಿಶಿಷ್ಟ ಜಾತಿ ಸಮುದಾಯಕ್ಕೆ ಹಾಲಿ ಶೇಕಡ 15 ರಷ್ಟು ಮೀಸಲಾತಿ ಇದ್ದು, ಇದನ್ನು ಹೆಚ್ಚಳ ಮಾಡಲಾಗಿದೆ. ಇದರಲ್ಲಿ ಬಲಗೈ ಸಮುದಾಯಗಳು ಸಿಂಹ ಪಾಲು ಪಡೆದುಕೊಂಡಿವೆ. ಎಡಗೈ ಸಮುದಾಯಕ್ಕೂ ಮೀಸಲಾತಿ ಕಲ್ಪಿಸಲು ಒಳ ಮೀಸಲಾತಿ ಜಾರಿಗೊಳಿಸಬೇಕೆಂಬ ಬೇಡಿಕೆ ಇದೆ. ಸುಮಾರು 25 ವರ್ಷಗಳಿಂದ ಬಾಕಿ ಉಳಿದ ಈ ಬೇಡಿಕೆ ಈಡೇರಿಸಲು ಸರ್ಕಾರ ಕ್ರಮ ಕೈಗೊಂಡಿದ್ದು, ನ್ಯಾಯಮೂರ್ತಿ ಸದಾಶಿವ ಆಯೋಗದ ಶಿಫಾರಸುಗಳ ಅನ್ವಯ ಒಳ ಮೀಸಲಾತಿ ಜಾರಿ ಬಗ್ಗೆ ವರದಿ ಸಲ್ಲಿಸಲು ಸಮಿತಿ ರಚಿಸಲಾಗಿದೆ. ವರದಿ ಆದರಿಸಿ ಪರಿಶಿಷ್ಟ ಜಾತಿ ಸಮುದಾಯಗಳಲ್ಲಿ ಒಳ ಮೀಸಲಾತಿ ಜಾರಿ ಮಾಡಲು ಸರ್ಕಾರ ಮುಂದಾಗಿದೆ.