ಬೆಂಗಳೂರು: ಮೀಸಲಾತಿ ವಿಚಾರವಾಗಿ ನನ್ನನ್ನು ಬಂಧುಗಳೂ ಗೇಲಿ ಮಾಡಿದ್ದರು. ಶ್ರೀರಾಮುಲು ಮೀಸಲಾತಿ ಕೊಡಿಸುವುದಾಗಿ ಬರಿ ಬಾಯಲ್ಲಿ ಹೇಳುತ್ತಾನೆ. ಸಚಿವನಾಗಿ ಇಷ್ಟು ದಿನವಾದ್ರೂ ಏನೂ ಮಾಡಲಾಗಿಲ್ಲ ಎಂದು ವ್ಯಂಗ್ಯವಾಡುತ್ತಿದ್ದರು. ಈಗ ರಾಜ್ಯ ಸರ್ಕಾರ ಎಸ್ ಸಿ, ಎಸ್ ಟಿ ಸಮುದಾಯದ ಮೀಸಲಾತಿಗೆ ಒಪ್ಪಿಗೆ ನೀಡುವ ಮೂಲಕ ಉತ್ತರ ನೀಡಿದೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಾರಿಗೆ ಸಚಿವ ಶ್ರೀರಾಮುಲು, ಎಸ್ ಟಿಗೆ ಮೀಸಲಾತಿ ಹೆಚ್ಚಿಸುವುದಾಗಿ ರಕ್ತದಲ್ಲಿ ಬರೆದುಕೊಡುತ್ತೇನೆ ಎಂದು ಮಾತು ಕೊಡುತ್ತೇನೆ ಎಂದಿದ್ದೆ. ಆದರೆ ಭರವಸೆ ಭರವಸೆಯಾಗಿಯೇ ಉಳಿದಿದೆ ಎಂದು ನನ್ನ ಬಂಧುಗಳೇ ನನ್ನನ್ನು ಗೇಲಿ ಮಾಡಲು ಆರಂಭಿಸಿದ್ದರು. ಕೆಲವರು ಬೈದಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಬೈಸಿಕೊಂಡು ಸಾಕಾಗಿ ಹೋಗಿತ್ತು. ಆದರೂ ನನ್ನ ಮೀಸಲಾತಿ ಹೆಚ್ಚಳ ಬೇಡಿಕೆ ಮಾತ್ರ ನನ್ನ ಕೈಬಿಡಲಿಲ್ಲ. ಎಸ್ ಟಿ ಮೀಸಲಾತಿಯನ್ನು ಶೇ.3ರಿಂದ 7ಕ್ಕೆ ಹೆಚ್ಚಿಸುವುದಾಗಿ ಸಿಎಂ ಬಸವರಾಜ್ ಬೊಮ್ಮಾಯಿ ಘೋಷಿಸಿದ್ದಾರೆ. ಸರ್ಕಾರ ಕೊಟ್ಟಮಾತಿನಂತೆ ನಡೆದುಕೊಂಡಿದೆ. ನನ್ನನ್ನು ಗೇಲಿ ಮಾಡುತ್ತಿದ್ದವರಿಗೆ ಈಗ ಸೂಕ್ತ ಉತ್ತರ ಸಿಕ್ಕಿದೆ ಎಂದು ಟಾಂಗ್ ನೀಡಿದರು.
ಎಸ್ ಸಿ ಮೀಸಲಾತಿ ಶೇ.15ರಿಂದ ಶೇ.17ಕ್ಕೆ ಹೆಚ್ಚಿಸಲು ಹಾಗೂ ಎಸ್ ಟಿ ಮೀಸಲಾತಿ ಪ್ರಮಾಣ ಶೇ.3ರಿಂದ 7ಕ್ಕೆ ಹೆಚ್ಚಿಸಲು ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿದ್ದು, ಇಂದು ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆಯಲಿದೆ.