ಗುಜರಾತಿನ ಅನೇಕ ಹಳ್ಳಿಗಳ ವಿಚಿತ್ರವಾದ ಹೆಸರುಗಳನ್ನು ಹೊಂದಿದ್ದು ಅವು ನಗು ತರಿಸಲೂ ಬಹುದು. ಸೂರತ್ ಜಿಲ್ಲೆಯ ಮಾಂಡವಿ ತಾಲೂಕಿನಲ್ಲಿ ಹಳ್ಳಿಯೊಂದರ ಹೆಸರು ಈ ಪ್ರದೇಶದ ಮಹಿಳೆಯರನ್ನು ವಿಚಿತ್ರ ಪರಿಸ್ಥಿತಿಗೆ ತಳ್ಳಿತ್ತು.
ಇದಕ್ಕೆ ಕಾರಣ ಈ ಗ್ರಾಮದ ಹೆಸರು ಚುಡೆಲ್. ‘ಚುಡೆಲ್’ ಎಂದರೆ ಮಾಟಗಾತಿ ಎಂಬ ಅರ್ಥ ಬರುತ್ತದೆ. ಚುಡೆಲ್ ಎಂಬ ಹೆಸರೇ ಜನರ ಎದೆಯಲ್ಲಿ ಭಯ ಹುಟ್ಟಿಸಿದರೂ, ಗ್ರಾಮದ ಹೆಸರೇ ಚುಡೆಲ್ ಎಂದಾಗ ಈ ಗ್ರಾಮದ ಗ್ರಾಮಸ್ಥರ ಭಾವನೆಗಳು ಏನಾಗಿರಬಹುದು ಎಂಬುದನ್ನು ಊಹಿಸಬಹುದು.
ಈ ಗ್ರಾಮದ ಹೆಸರನ್ನು ಬದಲಾಯಿಸಲು ಸ್ಥಳೀಯ ಸಂಸದ ಪ್ರಭು ವಾತ್ಸವ ಅವರು ಪ್ರಸ್ತಾವನೆ ಕಳುಹಿಸಿದ್ದರು. ಈ ವಿಷಯ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವುದರಿಂದ ಈ ಪ್ರಸ್ತಾವನೆಯನ್ನು ಗುಜರಾತ್ ಸರ್ಕಾರಕ್ಕೆ ವಾಪಸ್ ಕಳುಹಿಸಲಾಗಿದೆ.
ಚುಡೇಲ್ ಗ್ರಾಮ ಪಂಚಾಯಿತಿಯು ಗ್ರಾಮದ ಹೆಸರನ್ನು ಚಂದನಪುರ ಎಂದು ಬದಲಾಯಿಸಲು ಮುಂದಾಗಿದೆ. ಗುರುವಾರ, ಚುಡೇಲ್ ಗ್ರಾಮ ಪಂಚಾಯಿತಿಯ ಜಿಲ್ಲಾ ಮಟ್ಟದ ಸಭೆಯನ್ನು ಆಯೋಜಿಸಲಾಗಿತ್ತು, ಇದರಲ್ಲಿ ಗ್ರಾಮದ ಹೆಸರನ್ನು ಬದಲಾಯಿಸುವ ಪ್ರಸ್ತಾಪವನ್ನು ಮುಂದಿಡಲಾಯಿತು.
ಮಾಹಿತಿಯ ಪ್ರಕಾರ ಗುಜರಾತ್ 18,000 ಕ್ಕೂ ಹೆಚ್ಚು ಹಳ್ಳಿಗಳನ್ನು ಹೊಂದಿದೆ. ಗುಜರಾತಿನ ಹಳ್ಳಿಗಳ ವಿಶಿಷ್ಟ ಹೆಸರುಗಳು ನಿಗೂಢತೆಯನ್ನು ಹೆಚ್ಚಿಸುತ್ತವೆ. ಅಂತಹ ಹೆಸರುಗಳ ಕೆಲವು ಉದಾಹರಣೆಗಳೆಂದರೆ ಸಿಂಗಾಪುರ, ಶ್ರೀನಗರ, ಆಲೂ, ಭಿಂಡಿ, ಖಖ್ರಾ, ಮಹಾಭಾರತ, ರಾಮಾಯಣ. ಹೀಗೆ ಹತ್ತು ಹಲವು ಸಿಗುತ್ತವೆ.
ಇಷ್ಟು ಮಾತ್ರವಲ್ಲದೆ, ಗುಜರಾತ್ನಲ್ಲಿ ತರಕಾರಿಗಳು ಮತ್ತು ದ್ವಿದಳ ಧಾನ್ಯಗಳ ಹೆಸರನ್ನು ಹಳ್ಳಿಗಳಿಗೆ ಇಡಲಾಗಿದೆ. ಉದಾಹರಣೆಗೆ, ಬ್ರಹ್ಮಕೇಡದ ಬಳಿ ತೂರ್ ಎಂಬ ಗ್ರಾಮವಿದೆ, ವಾಧ್ವಾನ್ ಬಳಿ ರೇ, ಧಾರಿ ಬಳಿ ಜೀರಾ, ನಂಡೋಡ್ ಬಳಿ ಗ್ವಾರ್ ಮತ್ತು ಖಂಬಲಿಯಾ ಬಳಿಯ ಭಿಂಡಿ ಗ್ರಾಮವಿದೆ.
ದ್ವಾರಕಾ ಬಳಿಯ ಲಡ್ಡು, ಭುಜ್ ಬಳಿಯ ಧೋನ್ಸಾ/ದೋಸಾ, ಘೋಲ್ ಬಳಿಯ ಖಖ್ರಾ, ಛೋಟಾ ಉದಯ್ಪುರದ ಬಳಿ ಗಾಂಧಿಯಾ, ಮಾನವದಾರ್ ಬಳಿಯ ಶೆರ್ಡಿ (ಕಬ್ಬು) ಮತ್ತು ಜೆಟ್ಪುರ ಬಳಿಯ ಕಾಂಡ (ಈರುಳ್ಳಿ) ಎಂಬ ಹೆಸರೂ ಸಹ ಇದೆ.