ಭಾರತೀಯ ಸಂಸ್ಕೃತಿಯಲ್ಲಿ ನೆಲದ ಮೇಲೆ ಚಕ್ಕಳ ಮಕ್ಕಳ ಹಾಕಿ ಕುಳಿತು ಊಟ, ಉಪಹಾರ ಮಾಡಬೇಕೆಂಬ ನಿಯಮವಿದೆ. ಇದು ಕೇವಲ ಸಂಪ್ರದಾಯವಲ್ಲ. ಇದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ. ಕಳೆದ ಕೆಲವು ದಶಕಗಳಲ್ಲಿ ಡೈನಿಂಗ್ ಟೇಬಲ್ ಪ್ರವೃತ್ತಿ ಬಹಳಷ್ಟು ಹೆಚ್ಚಾಗಿದೆ.
ಡೈನಿಂಗ್ ಟೇಬಲ್ ಇದ್ದರೆ ಆಸನ ವಿಧಾನ ಬೇರೆಯೇ ಆಗಿರುತ್ತದೆ. ಆದ್ರೆ ಈ ರೀತಿ ಕುಳಿತು ತಿನ್ನುವುದು ಸೂಕ್ತವಲ್ಲ ಎನ್ನುತ್ತಾರೆ ನಮ್ಮ ಹಿರಿಯರು. ಮದುವೆಗಳು ಮತ್ತು ಪಾರ್ಟಿಗಳಲ್ಲಿ ಜನರು ತಟ್ಟೆಯನ್ನು ಕೈಯಲ್ಲಿ ಹಿಡಿದುಕೊಂಡು ನಿಂತೇ ತಿನ್ನುತ್ತಾರೆ. ಕೆಲವು ಹೋಟೆಲ್ ಮತ್ತು ದರ್ಶಿನಿಗಳಲ್ಲೂ ನಿಂತೇ ತಿನ್ನುವ ವ್ಯವಸ್ಥೆಯಿರುತ್ತದೆ.
ನೆಲದ ಮೇಲೆ ಕುಳಿತು ತಿನ್ನುವುದು ಏಕೆ ಪ್ರಯೋಜನಕಾರಿ? ನಾವು ಸರಿಯಾಗಿ ಕುಳಿತು ತಿನ್ನದಿದ್ದರೆ, ಆಹಾರದ ಜೀರ್ಣಕ್ರಿಯೆ ತೊಂದರೆಗೊಳಗಾಗಬಹುದು ಮತ್ತು ನೀವು ಅನೇಕ ರೋಗಗಳಿಗೆ ತುತ್ತಾಗಬಹುದು. ನೆಲದ ಮೇಲೆ ಚಕ್ಕಳ ಮಕ್ಕಳ ಹಾಕಿಕೊಂಡು ಕುಳಿತು ತಿನ್ನುವುದೇ ಸೂಕ್ತ. ಯಾಕಂದ್ರೆ ಅದರಿಂದ ಆರೋಗ್ಯಕ್ಕೆ ಸಾಕಷ್ಟು ಲಾಭಗಳಿವೆ.
ಆಹಾರದ ಮೇಲೆ ಗಮನ: ಆಹಾರವನ್ನು ಜಗಿದು ತಿನ್ನುವುದು ಮುಖ್ಯ. ನೆಲದ ಮೇಲೆ ಕುಳಿತು ತಿಂದರೆ ನಿಮ್ಮ ಸಂಪೂರ್ಣ ಗಮನವು ಆಹಾರದ ಮೇಲೆ ಇರುತ್ತದೆ. ನೀವು ಈ ಸ್ಥಿತಿಯಲ್ಲಿ ಆಹಾರವನ್ನು ಸರಿಯಾಗಿ ಅಗಿದು ತಿನ್ನಲು ಸಾಧ್ಯ. ಇದರಿಂದ ಮಲಬದ್ಧತೆಯಂತಹ ಸಮಸ್ಯೆಗಳಾಗುವುದಿಲ್ಲ.
ಅತಿಯಾಗಿ ತಿನ್ನುವುದನ್ನು ತಪ್ಪಿಸಬಹುದು: ನೆಲದ ಮೇಲೆ ಕುಳಿತುಕೊಳ್ಳುವುದಕ್ಕಿಂತ ಹೆಚ್ಚಾಗಿ ಆಹಾರದ ಮೇಲೆ ಗಮನವನ್ನು ಕೇಂದ್ರೀಕರಿಸುವುದರಿಂದ, ನೀವು ಹೆಚ್ಚು ಆಹಾರವನ್ನು ಸೇವಿಸುವುವುದಿಲ್ಲ. ಮಿತವಾಗಿ ತಿಂದಾಗ ಹೊಟ್ಟೆ ಉಬ್ಬರಿಸುವುದು, ಭಾರವಾಗುವುದು ಮುಂತಾದ ತೊಂದರೆಗಳಾಗುವುದಿಲ್ಲ. ಅಗತ್ಯಕ್ಕಿಂತ ಹೆಚ್ಚು ಆಹಾರ ಸೇವಿಸದಿದ್ದರೆ ತೂಕ ಹೆಚ್ಚಾಗುವುದಿಲ್ಲ. ನೀವು ಸ್ಥೂಲಕಾಯತೆಯನ್ನು ತಪ್ಪಿಸಿದರೆ, ಹೃದ್ರೋಗದ ಅಪಾಯ, ಅಧಿಕ ಬಿಪಿ ಸಹ ಇರುವುದಿಲ್ಲ.
ಮೂಳೆಗಳಲ್ಲಿ ನೋವು: ನೆಲದ ಮೇಲೆ ಅಡ್ಡಡ್ಡವಾಗಿ ಕಾಲುಗಳನ್ನಿಟ್ಟುಕೊಂಡು ಕುಳಿತು ಊಟ ಮಾಡುವುದರಿಂದ ನಿಮ್ಮ ಬೆನ್ನುಮೂಳೆ ಮತ್ತು ಕುತ್ತಿಗೆ ಎರಡೂ ಅತ್ಯುತ್ತಮವಾದ ಹಿಗ್ಗಿಸುವಿಕೆಯನ್ನು ಪಡೆಯುತ್ತವೆ. ಇದು ದೇಹ ಮತ್ತು ಮನಸ್ಸಿಗೆ ವಿಶ್ರಾಂತಿ ನೀಡುತ್ತದೆ. ದೀರ್ಘಾವಧಿಯಲ್ಲಿ ನಿಮಗೆ ಬೆನ್ನು ನೋವು ಅಥವಾ ಮೂಳೆ ನೋವು ಇರುವುದಿಲ್ಲ.