ಫೇಸ್ಬುಕ್ ಒಡೆಯ ಮಾರ್ಕ್ ಜುಕರ್‌ಬರ್ಗ್ ಉದ್ಯೋಗಿಗಳಿಗೆ ಶಾಕ್ ಕೊಡಲು ಸಜ್ಜಾಗಿದ್ದಾರೆ. ಮೆಟಾ ನೇತೃತ್ವ ವಹಿಸಿಕೊಂಡಿರೋ ಜುಕರ್ಬರ್ಗ್ ಉದ್ಯೋಗ ಕಡಿತಕ್ಕೆ ಮುಂದಾಗಿದ್ದಾರೆ. ಫೇಸ್‌ಬುಕ್‌ನ ಮಾತೃಸಂಸ್ಥೆ ಮೆಟಾ, ಕಡಿಮೆ ಕಾರ್ಯಕ್ಷಮತೆಯುಳ್ಳ ಸುಮಾರು 12,000 ಉದ್ಯೋಗಿಗಳನ್ನು ಸದ್ಯದಲ್ಲೇ ವಜಾ ಮಾಡಲಿದೆ.
ಕಳೆದ ಕೆಲವು ತಿಂಗಳುಗಳಿಂದ ಮೆಟಾ ನೇಮಕಾತಿಯನ್ನು ಕೂಡ ಸ್ಥಗಿತಗೊಳಿಸಿತ್ತು. ಈ ನಿರ್ಧಾರ ಕೈಗೊಂಡಿರುವುದು ಕೇವಲ ಫೇಸ್ಬುಕ್ ಮಾತ್ರವಲ್ಲ. ಮೆಟಾ ರಹಸ್ಯವಾಗಿ ಉದ್ಯೋಗಿಗಳನ್ನು ಕೆಲಸದಿಂದ ಕಿತ್ತು ಹಾಕ್ತಿದೆ ಎಂಬ ಮಾಹಿತಿಗಳು ಕೂಡ ವರದಿಯಾಗಿವೆ. ಇದು ಸಾವಿರಾರು ಉದ್ಯೋಗ ಕಡಿತಕ್ಕೆ ಕಾರಣವಾಗಬಹುದು.
ಕಂಪನಿ ಈ ಬಗ್ಗೆ ಯಾವುದೇ ನಿರ್ದಿಷ್ಟ ವಿವರಗಳನ್ನು ಬಹಿರಂಗಪಡಿಸಿಲ್ಲ. ಆದ್ರೆ ಸುಮಾರು ಶೇ.15ರಷ್ಟು ಉದ್ಯೋಗಿಗಳನ್ನು ವಜಾಗೊಳಿಸುವ ಸಾಧ್ಯತೆ ಇದೆ. ಕೆಲವು ಹಿರಿಯ ಅಧಿಕಾರಿಗಳು ಈ ನಿಟ್ಟಿನಲ್ಲಿ ಸದ್ದಿಲ್ಲದೇ ಕೆಲಸ ಮಾಡ್ತಿದ್ದಾರಂತೆ. ನೌಕರರನ್ನು ಬಲವಂತವಾಗಿ ಹೊರಹಾಕಲಾಗುತ್ತಿದೆ ಎಂದು ಫೇಸ್ಬುಕ್ ಉದ್ಯೋಗಿಗಳೇ ಹೇಳಿದ್ದಾರೆ.
Meta CEO ಈ ಹಿಂದೆಯೇ ಉದ್ಯೋಗ ಕಡಿತದ ಬಗ್ಗೆ ಎಚ್ಚರಿಕೆ ನೀಡಿದ್ದರು. ಮುಂದಿನ ವರ್ಷದಲ್ಲಿ ಹೆಡ್‌ಕೌಂಟ್ ಬೆಳವಣಿಗೆಯನ್ನು ಸ್ಥಿರವಾಗಿ ಕಡಿಮೆ ಮಾಡುವುದು ನಮ್ಮ ಯೋಜನೆ ಎಂದು ಜುಕರ್‌ಬರ್ಗ್ ಹೇಳಿದ್ದರು. ಆರ್ಥಿಕ ಹಿಂಜರಿತದ ನಡುವೆ ವೆಚ್ಚವನ್ನು ಕಡಿತಗೊಳಿಸಲು ಮೆಟಾ ಸಿಬ್ಬಂದಿಯನ್ನು ಕಡಿಮೆ ಮಾಡುತ್ತಿದೆ ಎನ್ನಲಾಗ್ತಿದೆ. ಉದ್ಯೋಗಿಗಳಿಗೆ 30-60ದಿನಗಳ ಕಾಲಾವಕಾಶ ನೀಡಲಾಗುತ್ತದೆ. ಒಂದೋ ಅವರು ಕೆಲಸ ಬಿಡಬೇಕು, ಅಥವಾ ಕಂಪನಿಯೊಳಗೆ ಬೇರೆ ಜವಾಬ್ಧಾರಿಯನ್ನು ಹುಡುಕಿಕೊಳ್ಳಬೇಕು.