ನವರಾತ್ರಿಯಂದು ಒಂಬತ್ತು ದಿನವೂ ದುರ್ಗೆ ವಿವಿಧ ರೂಪಗಳಲ್ಲಿ ಕಂಗೊಳಿಸುತ್ತಿರುತ್ತಾಳೆ. ಭಿನ್ನ ಭಿನ್ನ ರೂಪ ತಾಳಿರುವ, ಆ ದೇವಿಯ ಮೂರ್ತಿ ಮೆರವಣಿಗೆ ಹೊರಟಾಗ ಅದನ್ನ ನೋಡೋದೇ ಕಣ್ಣಿಗೆ ಹಬ್ಬ. ಆದರೆ ಈ ಬಾರಿ ಹುಬ್ಬಳಿ-ಧಾರವಾಡ ಸ್ಮಾರ್ಟ್ ಸಿಟಿಯ ರಸ್ತೆ ಮಧ್ಯದಲ್ಲಿ ದೇವಿಯು ನಡೆದುಕೊಂಡು ಬರ್ತಿರೋದನ್ನ ನೋಡಿ ಜನರು ಹೌಹಾರಿ ಹೋಗಿದ್ದರು.
ಹರ್ಷಿತಾ ಮೆಹರವಾಡೆ ಎಂಬ ಬಾಲಕಿ ಹಬ್ಬದ ಪ್ರಯುಕ್ತ ದೇವಿಯಂತೆ ಅಲಂಕಾರ ಮಾಡಿಕೊಂಡಿದ್ದಾಳೆ. ಸೀರೆ ಉಟ್ಟಿಕೊಂಡು, ತಲೆಗೆ ಮುಕುಟ, ಕೊರಳಿಗೆ ಹಾರ, ಕೈಯಲ್ಲಿ ತ್ರಿಶೂಲ ಹಿಡಿದುಕೊಂಡು ಆಕೆ ನೇರವಾಗಿ ಬಂದಿದ್ದು, ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ರಸ್ತೆಗೆ.
ಅದು ಕೂಡಾ ಅಂತಿಂಥ ರಸ್ತೆಯಲ್ಲ, ಗುಂಡಿಬಿದ್ದು, ಕೆಸರು ತುಂಬಿದ್ದ ರಸ್ತೆ. ಅಲ್ಲಿ ಕಣ್ಣಾಡಿಸಿದ್ದಲ್ಲೆಲ್ಲ ಕಸದ ರಾಶಿ ಮಧ್ಯೆಯೇ ಹೆಜ್ಜೆ ಹಾಕಿದ್ದಾಳೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅಸಲಿಗೆ ಇದು ಇಲ್ಲಿನ ರಸ್ತೆಗಳ ಪರಿಸ್ಥಿತಿ ಹೇಗಿದೆ ಅನ್ನೋದು ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ ಮನವರಿಕೆ ಮಾಡಿಸುವುದಕ್ಕಾಗಿ ಮಾಡಿರುವ ಪ್ರಯತ್ನ ಇದಾಗಿದೆ. ಇಷ್ಟು ದಿನ ಮಾತಲ್ಲಿ ಹೇಳಿದರೂ, ದೂರು ಹೇಳಿದರೂ ಅರ್ಥವಾಗದ ಕಾರಣ ಸ್ಥಳೀಯರು ಈ ಮೂಲಕ ತಮ್ಮ ಮನಸ್ಸಲ್ಲಿದ್ದ ಆಕ್ರೋಶವನ್ನ ಹೊರಹಾಕಿದ್ದಾರೆ.