ಕಲಬುರಗಿ: ಎಲ್ಲರ ಒತ್ತಾಯದ ಮೇರೆಗೆ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದೇನೆ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಕಲಬುರ್ಗಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅಧ್ಯಕ್ಷರಾಗಲು ಒಪ್ಪದ ಹಿನ್ನೆಲೆಯಲ್ಲಿ ಚುನಾವಣೆ ಪ್ರಕ್ರಿಯೆ ಕೈಗೊಳ್ಳಲಾಗಿದೆ. ನನ್ನ ತತ್ವ ಸಿದ್ಧಾಂತವನ್ನು ಬೆಂಬಲಿಸುವವರು ನನ್ನ ಪರವಾಗಿ ನಿಲ್ಲುತ್ತಾರೆ. ಸ್ಪರ್ಧಿಸಬೇಡ ಎಂದು ಶಶಿ ತರೂರ್ ಅವರಿಗೆ ಹೇಳಲು ಆಗುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಸ್ಪರ್ಧೆಗೆ ಎಲ್ಲರಿಗೂ ಅವಕಾಶವಿದೆ ಎಂದರು.
ಬಡತನ ನಿರ್ಮೂಲನೆ ಮಾಡಲು ನೆಹರು ಪ್ರಯತ್ನ ಮಾಡಿದ್ದರು. ಆದರೆ, ಬಿಜೆಪಿ ಮತ್ತು ಆರ್.ಎಸ್.ಎಸ್. ಬಡತನವನ್ನು ಬೆಳೆಸುತ್ತಿವೆ ಎಂದು ಟೀಕಿಸಿದ್ದಾರೆ.
ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಕಲ್ಬುರ್ಗಿಗೆ ಒಂದು ಅವಕಾಶ ಸಿಕ್ಕಿದೆ. ನೋಡೋಣ ಏನಾಗುತ್ತದೆಯೋ? ಕಾಂಗ್ರೆಸ್ ನಲ್ಲಿ ಕೇಸ್ ಇದ್ದವರು ಬಿಜೆಪಿಗೆ ಹೋಗಿ ಕ್ಲೀನ್ ಚಿಟ್ ಆಗಿಬಿಟ್ಟರು. ಬಿಜೆಪಿಗೆ ಹೋದ ತಕ್ಷಣವೇ ಅವರು ಶುದ್ಧರಾಗಿ ಬಿಟ್ಟರೆ ಎಂದು ಖರ್ಗೆ ಪ್ರಶ್ನಿಸಿದ್ದಾರೆ. ಬಿಜೆಪಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿಲ್ಲ. ನಮ್ಮಲ್ಲಿ ಐದನೇ ಬಾರಿಗೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಗಾಂಧಿ ಕುಟುಂಬದವರು ಯಾರಿಗೂ ಬೆಂಬಲ ನೀಡಿಲ್ಲ ಎಂದು ಹೇಳಿದ್ದಾರೆ.