ದೇಶದಾದ್ಯಂತ ದೊಡ್ಡ ಮಟ್ಟದ ಸುದ್ದಿಯಾಗಿದ್ದ ಹೊನ್ನಾವರದ ಪರೇಶ್ ಮೇಸ್ತಾ ಸಾವಿನ ಪ್ರಕರಣದ ತನಿಖೆ ಕೈಗೊಂಡಿದ್ದ ಸಿಬಿಐ, ಸೋಮವಾರದಂದು ಹೊನ್ನಾವರ ನ್ಯಾಯಾಲಯಕ್ಕೆ ತನಿಖಾ ವರದಿಯನ್ನು ಸಲ್ಲಿಸಿದ್ದು, ಇದು ಹತ್ಯೆಯಲ್ಲ. ಅಪಘಾತದಿಂದ ಸಂಭವಿಸಿದ ಸಾವು ಎಂದು ವರದಿಯಲ್ಲಿ ತಿಳಿಸಿದೆ ಎನ್ನಲಾಗಿದೆ.
2017ರ ಡಿಸೆಂಬರ್ 6ರಂದು ಹೊನ್ನಾವರದಲ್ಲಿ ನಡೆದ ಗಲಭೆ ಸಂದರ್ಭದಲ್ಲಿ 18 ವರ್ಷದ ಪರೇಶ್ ಮೇಸ್ತಾ ಎಂಬ ಯುವಕ ನಾಪತ್ತೆಯಾಗಿದ್ದು, ಎರಡು ದಿನಗಳ ಬಳಿಕ ಈತನ ಶವ ಕೆರೆಯಲ್ಲಿ ಪತ್ತೆಯಾಗಿತ್ತು. ಈತನನ್ನು ಅನ್ಯ ಕೋಮಿನವರು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿ ದೊಡ್ಡ ಪ್ರತಿಭಟನೆ ನಡೆಸಲಾಗಿತ್ತು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಪರೇಶ್ ಮೇಸ್ತಾ ನಿವಾಸಕ್ಕೆ ಭೇಟಿ ನೀಡಿ ಆತನ ಪೋಷಕರಿಗೆ ಸಾಂತ್ವಾನ ಹೇಳಿದ್ದರು. ಆ ಸಂದರ್ಭದಲ್ಲಿ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯನವರು ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಿದ್ದು, ಇದೀಗ ಸಿಬಿಐ ಅಧಿಕಾರಿಗಳು ಇದು ಹತ್ಯೆಯಲ್ಲ. ಅಪಘಾತದಿಂದ ಸಂಭವಿಸಿದ ಸಾವು ಎಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.