ಎರಡು ವರ್ಷ ಎಡೆಬಿಡದೆ ಕಾಡಿದ ಕೋವಿಡ್ ಸೋಂಕು ತೊಲಗಿದ ನಂತರ ಜನ ನಿರಾಳ ಭಾವ ತಾಳಿ ಸಕಲ ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ.
ಈಚೆಗಷ್ಟೇ ಗಣೇಶನಿಗೆ ವಿದಾಯ ಹೇಳಿ ಇದೀಗ ಜಗದಾಂಬೆಯನ್ನು ಬರ ಮಾಡಿಕೊಂಡಿದ್ದಾರೆ. ಬಹು ಸಂಸ್ಕೃತಿಯ ನೆಲದಲ್ಲಿ ವಿಶಿಷ್ಟ ಆಚರಣೆ ಮತ್ತೆ ನೆಲೆಗೊಂಡಿದೆ. ಹಿಂದಿನ ವರ್ಷಗಳಿಗಿಂತ ಈ ಬಾರಿ ನವರಾತ್ರಿ ಸಂಭ್ರಮ ಮುಗಿಲು ಮುಟ್ಟಿದೆ.
ಉತ್ತರಪ್ರದೇಶದಲ್ಲೂ ನವರಾತ್ರಿ ಹಬ್ಬ ಮನೆಮಾಡಿದೆ. ಆದರೆ ಹಬ್ಬದ ಸಂಭ್ರಮದ ಮಧ್ಯೆ ನಡೆದ ಘಟನೆಯೊಂದು ಆಘಾತವನ್ನುಂಟು ಮಾಡಿದೆ. ಫತೇಪುರ್ ಜಿಲ್ಲೆಯಲ್ಲಿ ಈ ಅವಘಡ ನಡೆದಿದೆ.
ಇಲ್ಲಿ ಹಬ್ಬದ ಪ್ರಯುಕ್ತ ರಾಮಲೀಲಾ ನಾಟಕವನ್ನ ಮಾಡಲಾಗುತ್ತಿತ್ತು. ಈ ನಾಟಕದಲ್ಲಿ ಮಹಾಬಲಿ ಹನುಮಂತನ ಪಾತ್ರವನ್ನು ನಿರ್ವಹಿಸುತ್ತಿದ್ದ ಕಲಾವಿದರೊಬ್ಬರು ವೇದಿಕೆಯಲ್ಲೇ ಸಾವನ್ನಪ್ಪಿದ್ದಾರೆ. ಧಾತಾ ಪೊಲೀಸ್ ಠಾಣೆ ವ್ಯಾಪ್ತಿಯ ಸೇಲಂಪುರ ಗ್ರಾಮದಲ್ಲಿ ಘಟನೆ ನಡೆದಿದೆ.
ನವರಾತ್ರಿಯ ಪ್ರಯುಕ್ತ ಸೇಲಂಪುರದಲ್ಲಿ ದೇವಿಯ ಜಾಗರಣ ಕಾರ್ಯಕ್ರಮ ನಡೆಯುತ್ತಿತ್ತು. ಗ್ರಾಮದ 50 ವರ್ಷದ ರಾಮಸ್ವರೂಪ ಮಹಾಬಲಿ ಹನುಮಂತನ ಪಾತ್ರ ಮಾಡುತ್ತಿದ್ದರು. ವೇದಿಕೆಯಲ್ಲಿ, ಲಂಕೆಗೆ ಬೆಂಕಿ ಹಚ್ಚಲು ಅವರ ಬಾಲಕ್ಕೆ ಬೆಂಕಿ ಹಚ್ಚಲಾಗಿತ್ತು.
ಪಾತ್ರದಲ್ಲಿ ಮುಳುಗಿದ್ದ ಹನುಮಂತ್ರನ ಪಾತ್ರಧಾರಿ ಬಾಲಕ್ಕೆ ಬೆಂಕಿ ಹಚ್ಚಿಕೊಂಡು ಕೆಲ ಸುತ್ತುಗಳನ್ನ ಹಾಕಿದ್ದರು. ಅದಾಗಿ ಕೆಲವೇ ನಿಮಿಷಗಳಾಗಿತ್ತು ಅಷ್ಟೆ, ಆ ಕ್ಷಣವೇ ಅವರಿಗೆ ಹೃದಯಾಘಾತವಾಗಿದೆ. ಅವರು ಸಿಂಹಾಸನದಿಂದ ತಲೆಕೆಳಗಾಗಿ ಕೆಳಗೆ ಕುಸಿದು ಬಿದ್ದಿದ್ದಾರೆ. ಅವರನ್ನು ಎತ್ತಲು ಜನರು ಓಡಿ ಬಂದಿದ್ದಾರೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಾಗಲೇ ಅವರು ಕೊನೆಯುಸಿರೆಳೆದಿದ್ದರು.
ಈ ಘಟನೆಯಿಂದಾಗಿ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಹಿರಿಯ ಕಲಾವಿದ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಘಟನೆಯ ನಂತರ ಪೆಂಡಾಲ್ನಲ್ಲಿ ನೀರವ ಮೌನ ಆವರಿಸಿತ್ತು.
ವೇದಿಕೆಯನ್ನು ನೋಡುತ್ತಿದ್ದ ಅವರ ಪತ್ನಿ ಅಳಲಾರಂಭಿಸಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
https://twitter.com/rishabhmanitrip/status/1576589257317429249?ref_src=twsrc%5Etfw%7Ctwcamp%5Etweetembed%7Ctwterm%5E1576589257317429249%7Ctwgr%5E42be07e12806e806f69862daffb1771c0d6b0583%7Ctwcon%5Es1_&ref_url=https%3A%2F%2Fwww.india.com%2Fviral%2Fviral-video-shocking-man-playing-hanuman-suffers-heart-attack-during-ramlila-performance-dies-on-stage-5665986%2F