ಅತಿಯಾದ್ರೆ ಅಮೃತವೂ ವಿಷವಾಗುತ್ತೆ ಅನ್ನೋ ಮಾತೇ ಇದೆ. ಪ್ರೀತಿ, ಪ್ರೇಮ ಕೂಡ ಹಾಗೇನೆ. ಅತಿಯಾದರೆ ಬ್ರೇಕಪ್ಗೂ ಕಾರಣವಾಗಬಹುದು. ನಾವು ಪ್ರೀತಿಸುತ್ತಿರುವವರು ಯಾವಾಗಲೂ ನಮ್ಮ ಕಣ್ಣ ಮುಂದೆಯೇ ಇರಬೇಕು ಎಂಬ ಆಸೆ ಸಹಜ. ಒಟ್ಟಿಗೆ ಹೆಚ್ಹೆಚ್ಚು ಸಮಯ ಕಳೆಯಲು ಎಲ್ಲರೂ ಇಷ್ಟಪಡ್ತಾರೆ. ಪ್ರೀತಿಯು ಇಬ್ಬರನ್ನೂ ಪರಸ್ಪರ ಮತ್ತಷ್ಟು ಹತ್ತಿರ ತರುವ ಭಾವನೆಯಾಗಿದೆ.
ಆದರೆ ಸಂಬಂಧ ಯಾವಾಗಲೂ ಒಂದೇ ತೆರನಾಗಿರುವುದಿಲ್ಲ. ಅದರಲ್ಲಿಯೂ ಏರಿಳಿತಗಳಿರುತ್ತವೆ. ಕೆಲವೊಮ್ಮೆ ನಮ್ಮ ತಪ್ಪುಗಳಿಂದಾಗಿ ಸಂಬಂಧ ಕಗ್ಗಂಟಾಗುತ್ತದೆ. ಕೆಲವರು ಸಂಗಾತಿಯ ಬಗ್ಗೆ ಅತಿಯಾದ ಪ್ರೀತಿ ಹೊಂದಿರ್ತಾರೆ. ಇದು ಅವರಿಗೆ ಉಸಿರಗಟ್ಟಿಸಿದಂತಹ ಸ್ಥಿತಿಯನ್ನು ತಂದೊಡ್ಡಬಹುದು. ಹಿತವಾಗಿ, ಮಿತವಾಗಿ ಇದ್ದರೆ ಮಾತ್ರ ಸಂಬಂಧ ಚೆನ್ನಾಗಿರಲು ಸಾಧ್ಯ.
ನಿಮ್ಮ ಸಂಗಾತಿಗೆ ನೀವು ಎಷ್ಟೇ ಆಪ್ತರಾಗಿದ್ದರೂ ಸ್ವತಂತ್ರರಾಗಿರಲು ಅವರಿಗೂ ಅವಕಾಶ ಕೊಡಿ. ಹೀಗೆ ಮಾಡದಿದ್ದರೆ ಆ ವ್ಯಕ್ತಿಯೊಂದಿಗಿನ ಸಂಬಂಧ ಹೆಚ್ಚು ಕಾಲ ಉಳಿಯುವುದಿಲ್ಲ. ಉದಾಹರಣೆಗೆ ನಿಮ್ಮ ಸಂಗಾತಿಯು ಕೆಲವು ಕೆಲಸವನ್ನು ಮಾಡಲು ಬಯಸಿದರೆ ಎಲ್ಲದಕ್ಕೂ ಅಡ್ಡಿಯಾಗಬೇಡಿ. ಅಥವಾ ನಿಮ್ಮನ್ನು ಕೇಳಿಯೇ ಮಾಡಬೇಕೆಂಬ ಷರತ್ತು ಹಾಕಬೇಡಿ. ಪ್ರತಿಯೊಬ್ಬ ವ್ಯಕ್ತಿಯೂ ಸ್ವತಃ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕನ್ನು ಹೊಂದಿದ್ದಾನೆ.
ಇಬ್ಬರ ಹೃದಯಗಳು ಬೆರೆತಾಗ ಯಾವುದನ್ನೂ ಮರೆಮಾಚಬಾರದು ಅಥವಾ ಮುಚ್ಚಿಡಬಾರದು ಅನ್ನೋದನ್ನು ಕೇಳಿರಬಹುದು. ಆದರೆ ಎಲ್ಲರೊಂದಿಗೆ ಎಲ್ಲಾ ರಹಸ್ಯಗಳನ್ನೂ ಹಂಚಿಕೊಳ್ಳುವುದು ಅಸಾಧ್ಯ. ಯಾವಾಗಲೂ ಆತನ ಮೊಬೈಲ್, ಇಮೇಲ್ನಲ್ಲಿ ಸಂದೇಶವನ್ನು ಪರಿಶೀಲಿಸುವುದು ಅಥವಾ ಇನ್ಬಾಕ್ಸ್ ಚೆಕ್ ಮಾಡುವ ದುರಭ್ಯಾಸ ಇಟ್ಟುಕೊಳ್ಳಬೇಡಿ. ಹೀಗೆ ಮಾಡುವುದರಿಂದ ಸಂಗಾತಿಗೆ ಸದಾ ತನ್ನ ಮೇಲೆ ನಿಗಾ ಇಡಲಾಗುತ್ತಿದೆ ಎಂಬ ಭಾವನೆ ಮೂಡುತ್ತದೆ. ಇದು ಅವರ ನೆಮ್ಮದಿ ಕಸಿದುಕೊಳ್ಳುತ್ತದೆ.
ಪ್ರೀತಿ, ಪ್ರೇಮ ಹೊಸದಾಗಿದ್ದಾಗ ಯಾವಾಗಲೂ ಜೊತೆಯಾಗಿರಬೇಕು ಎಂಬ ಭಾವನೆ ಸಹಜ. ನವದಂಪತಿಗಳಂತೂ ಅರೆಕ್ಷಣವೂ ಬಿಟ್ಟಿರಲಾರದಷ್ಟು ಸಾಮೀಪ್ಯವನ್ನು ಬಯಸುತ್ತಾರೆ. ಆದರೆ ಕಾಲಕ್ಕೆ ತಕ್ಕಂತೆ ಈ ವರ್ತನೆಯಲ್ಲಿ ಬದಲಾವಣೆ ತರುವುದು ಅಗತ್ಯ. ಪ್ರತಿಯೊಬ್ಬ ವ್ಯಕ್ತಿಗೂ ತನಗಾಗಿ ಒಂದು ವಿಶೇಷ ಸಮಯ ಬೇಕಾಗುತ್ತದೆ, ಇದನ್ನು ಮಿ ಟೈಮ್ ಎಂದೂ ಕರೆಯುತ್ತಾರೆ. ಇದು ಸಂಭವಿಸದಿದ್ದರೆ, ಅವರು ಸಂಬಂಧದ ಭಾರವನ್ನು ಅನುಭವಿಸಲು ಪ್ರಾರಂಭಿಸುತ್ತಾರೆ. ಹೆಚ್ಚು ಸಮಯ ಕಳೆಯಲು ಅವರ ಸ್ನೇಹಿತರು ಮತ್ತು ಸಂಬಂಧಿಕರನ್ನು ಭೇಟಿ ಮಾಡಲು ನೀವು ಅವರಿಗೆ ಅನುಮತಿಸದಿದ್ದರೆ, ಅದು ಸಮಸ್ಯೆ ಉಂಟುಮಾಡಬಹುದು.