ಬೆಂಗಳೂರು: ಕಾಂಗ್ರೆಸ್ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆ ವಿರುದ್ಧ ರಾಜ್ಯ ಬಿಜೆಪಿ ಪೋಸ್ಟರ್ ಅಭಿಯಾನ ಆರಂಭಿಸಿದೆ. ಅಧಿಕಾರಕ್ಕಾಗಿ ನಕಲಿ ಗಾಂಧಿಗಳು ಯಾತ್ರೆ ಪ್ರಾರಂಭಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಾಗ್ದಾಳಿ ನಡೆಸಿದೆ.
ಸ್ವಾತಂತ್ರ್ಯ ದೊರಕಿತು. ಕಾಂಗ್ರೆಸ್ ಪಕ್ಷದ ಅವಶ್ಯಕತೆ ಇಲ್ಲ. ಅದನ್ನು ವಿಸರ್ಜಿಸಿ ಎಂದು ಹೇಳಿದ ಮಹಾತ್ಮ ಗಾಂಧಿಯವರ ಮಾತನ್ನು ಧಿಕ್ಕರಿಸಿದ ನಕಲಿ ಗಾಂಧಿಗಳು, ಇವತ್ತು ಯಾವ ನೈತಿಕತೆಯಿಂದ ಗಾಂಧಿ ಜಯಂತಿ ಆಚರಿಸುತ್ತಿದ್ದೀರಿ ?ಎಂದು ಪ್ರಶ್ನಿಸಿದೆ.
ಕಾಂಗ್ರೆಸ್, ಓಲೈಕೆ ರಾಜಕಾರಣಕ್ಕಾಗಿ ಗೋ ಹತ್ಯೆ ಪ್ರೋತ್ಸಾಹಿಸುವಾಗ, ಗೋ ಹತ್ಯೆ ನಿಷೇಧಿಸಲು ಹೇಳಿದ ಮಹಾತ್ಮ ಗಾಂಧಿಯವರ ಮಾತು ನಿಮಗೆ ನೆನಪಾಗಲಿಲ್ಲ. ಈಗ ಯಾವ ನೈತಿಕತೆಯಿಂದ ನೀವು ಗಾಂಧಿ ಜಯಂತಿ ಆಚರಿಸುತ್ತಿದ್ದೀರಿ ಎಂದು ಕಾಂಗ್ರೆಸ್ ನಾಯಕರನ್ನು ಕೇಳಿದೆ.
ಈ ದೇಶದ ಉಳಿವಿಗಾಗಿ ಸತ್ಯಾಗ್ರಹ ಆಚರಿಸಿದ ಮಹಾತ್ಮಾ ಗಾಂಧಿ ಅವರಿಗೂ, ಅಧಿಕಾರಕ್ಕಾಗಿ ತಮ್ಮ ಹೆಸರಿನ ಮುಂದೆ ಗಾಂಧಿಯೆಂದು ಹಾಕಿಸಿಕೊಂಡ ನಕಲಿ ಗಾಂಧಿಗಳಿಗೂ ಅಜಗಜಾಂತರ ವ್ಯತ್ಯಾಸವಿದೆ. ಅಧಿಕಾರಕ್ಕಾಗಿ ಯಾತ್ರೆ ನಡೆಸುತ್ತಿರುವ ನಕಲಿ ಗಾಂಧಿಗಳು ಎಂದು ಸರಣಿ ಪೋಸ್ಟರ್ ಗಳನ್ನು ಪ್ರಕಟಿಸಿ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದೆ.