ಸಂಚಾರ ದಟ್ಟಣೆ, ಟ್ರಾಫಿಕ್ ಜಾಮ್ಗೆ ತಾರತಮ್ಯವಿಲ್ಲ. ಐಷಾರಾಮಿ ಕಾರ್ ಬ್ರಾಂಡ್ನ ಉನ್ನತ ಕಾರ್ಯನಿರ್ವಾಹಕರಾಗಿದ್ದರೂ ಸಹ, ಎಲ್ಲರಂತೆ ದಟ್ಟಣೆಯನ್ನು ಎದುರಿಸಲೇ ಬೇಕಾಗುತ್ತದೆ.
ಮರ್ಸಿಡಿಸ್ ಬೆಂಜ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾರ್ಟಿನ್ ಶ್ವೆಂಕ್ ಅವರು ಟ್ರಾಫಿಕ್ ಜಾಮ್ನಿಂದ ದಾರಿ ಕಾಣದೇ ಆಟೋ ರಿಕ್ಷಾವನ್ನು ಬಳಸಿದ್ದಾರೆ.
ಪುಣೆಯಲ್ಲಿ ಟ್ರಾಫಿಕ್ನಲ್ಲಿ ಸಿಕ್ಕಿಹಾಕಿಕೊಂಡ ನಂತರ, ಶ್ವೆಂಕ್ ತನ್ನ ಮರ್ಸಿಡಿಸ್ ಎಸ್- ಕ್ಲಾಸ್ ಅನ್ನು ಬಿಟ್ಟು ತಾವು ತಲುಪಬೇಕಾದ ಸ್ಥಾನಕ್ಕೆ ಉಳಿದಿರುವ ದೂರವನ್ನು ಕ್ರಮಿಸಲು ಆಟೋವನ್ನು ಬಾಡಿಗೆಗೆ ಪಡೆಯಲು ಕಾಲ್ನಡಿಗೆಯಲ್ಲಿ ಒಂದು ಕಿಲೋಮೀಟರ್ ನಡೆದರು.
ಇನ್ಸ್ಟಾಗ್ರಾಮ್ನಲ್ಲಿ ತಮ್ಮ ಆಟೋ ಸವಾರಿಯ ಫೋಟೋವನ್ನು ಹಂಚಿಕೊಂಡ ಅವರು, ಸಂಚಾರ ದಟ್ಟಣೆಯಿಂದ ಹೊರಬರಲು ಆಟೋ ರಿಕ್ಷಾ ಏರಬೇಕಾಯಿತು ಎಂದು ಹೇಳಿದರು.
“ನಿಮ್ಮ ಎಸ್- ಕ್ಲಾಸ್ ಅದ್ಭುತವಾದ ಪುಣೆ ರಸ್ತೆಗಳ ಟ್ರಾಫಿಕ್ನಲ್ಲಿ ಸಿಲುಕಿಕೊಂಡರೆ ಏನು ಮಾಡುತ್ತೀರಿ? ಬಹುಶಃ ಕಾರಿನಿಂದ ಇಳಿದು, ಕೆಲವು ಕಿಮೀ ನಡೆಯಲು ಪ್ರಾರಂಭಿಸಿ ನಂತರ ರಿಕ್ಷಾ ಹಿಡಿಯಬಹುದೇ?” ಎಂದು ಅವರು ಬರೆದುಕೊಂಡಿದ್ದು, ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕೆಲವರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.