ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಿಂದ ಸದ್ಯದಲ್ಲೇ ಗುಡ್ ನ್ಯೂಸ್ ಒಂದು ಹೊರಬೀಳಲಿದೆ. ಇತ್ತೀಚೆಗೆ ನಮೀಬಿಯಾದಿಂದ ತಂದ 8 ಚಿರತೆಗಳಲ್ಲಿ ಒಂದಾದ ‘ಆಶಾ’ ಎಂಬ ಹೆಣ್ಣು ಚಿರತೆ ಗರ್ಭಿಣಿ ಎಂದು ಹೇಳಲಾಗುತ್ತಿದೆ.
‘ಆಶಾ’ ಗರ್ಭಿಣಿಯಾಗಿದ್ದರೆ ಭಾರತದಲ್ಲಿ ಚೀತಾಗಳ ಸಂಖ್ಯೆ ಹೆಚ್ಚಳಕ್ಕೆ ಕೊಡುಗೆ ಸಿಕ್ಕಂತಾಗುತ್ತದೆ. ಪುಟ್ಟ ಅತಿಥಿಗಳ ಆಗಮನದಿಂದ ದೇಶದಲ್ಲಿ ಚಿರತೆಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ. ಹೆಣ್ಣು ಚೀತಾ ‘ಆಶಾ’ ಗರ್ಭಿಣಿಯಾಗಿರುವ ಬಗ್ಗೆ ಅಧಿಕೃತ ಹೇಳಿಕೆ ಬಂದಿಲ್ಲ.
ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿರುವ ನಾಲ್ಕು ಹೆಣ್ಣು ಚಿರತೆಗಳಿವೆ. ‘ಆಶಾ’ ಗರ್ಭಿಣ ಅನ್ನೋದು ಖಚಿತವಾದಲ್ಲಿ ಏಳು ದಶಕಗಳ ನಂತರ ಭಾರತದಲ್ಲಿ ಹೊಸ ಚಿರತೆಗಳ ಸಂಖ್ಯೆ ಹೆಚ್ಚಾಗಲಿದೆ. ಅಲ್ಲದೆ ಈ ರಾಷ್ಟ್ರೀಯ ಉದ್ಯಾನವನದಲ್ಲಿ ಮರಿಗಳಿಗೆ ಜನ್ಮ ನೀಡಿದ ಮೊದಲ ಹೆಣ್ಣು ಚಿರತೆ ಎನಿಸಿಕೊಳ್ಳಲಿದೆ ‘ಆಶಾ’. ಈ ಹೆಣ್ಣು ಚಿರತೆ ಗರ್ಭಧಾರಣೆಯ ಎಲ್ಲಾ ನಡವಳಿಕೆ, ದೈಹಿಕ ಮತ್ತು ಹಾರ್ಮೋನ್ ಲಕ್ಷಣಗಳನ್ನು ಪಡೆಯುತ್ತಿದೆ. ಆದರೆ ಅಕ್ಟೋಬರ್ ಅಂತ್ಯದವರೆಗೆ ಚಿರತೆ ಗರ್ಭಿಣಿಯಾಗಿರುವುದು ಹೌದೋ ಅಲ್ಲವೋ ಎಂಬುದನ್ನು ಖಚಿತಪಡಿಸಲು ಸಾಧ್ಯವಿಲ್ಲ ಅಂತಾ ಅಧಿಕಾರಿಗಳು ತಿಳಿಸಿದ್ದಾರೆ.
ಈ ಚಿರತೆಗೆ ಇದು ಮೊದಲ ಗರ್ಭಧಾರಣೆ. ಗರ್ಭಿಣಿ ಚಿರತೆಯನ್ನು ಪ್ರತ್ಯೇಕವಾಗಿ ಮತ್ತು ಶಾಂತವಾಗಿ ಇಡಬೇಕು. ಸಿಬ್ಬಂದಿಯೂ ಹೆಚ್ಚಿನ ನಿಗಾ ಇಡಬೇಕು. ಸಾಮಾನ್ಯವಾಗಿ ಜನನದ ಸಮಯದಲ್ಲಿ ಚೀತಾ ಮರಿಗಳ ತೂಕವು 240 ಗ್ರಾಂ ನಿಂದ 425 ಗ್ರಾಂವರೆಗೆ ಇರುತ್ತದೆ. ಹೆಣ್ಣು ಚಿರತೆ ತನ್ನ ಮರಿಗಳನ್ನು ಸುಮಾರು ಆರರಿಂದ ಎಂಟು ವಾರಗಳವರೆಗೆ ಮರೆಮಾಡುತ್ತದೆ. ನಂತರ ಯಾರಿಗೂ ಮರಿಗಳು ಕಾಣಿಸದಂತೆ ಸ್ಥಳದಿಂದ ಸ್ಥಳಕ್ಕೆ ಬದಲಾಯಿಸುತ್ತದೆ. ಹುಟ್ಟಿದ ನಂತರ ಒಂದೂವರೆ ವರ್ಷದವರೆಗೆ ತಾಯಿ ತನ್ನ ಮರಿಗಳನ್ನು ನೋಡಿಕೊಳ್ಳುತ್ತಾಳೆ. ಕೂನೊ ರಾಷ್ಟ್ರೀಯ ಉದ್ಯಾನವನದಲ್ಲಿ ಫ್ರೆಡ್ಡಿ, ಎಲ್ಟನ್ ಮತ್ತು ಓಬಾನ್ ಎಂಬ ಮೂರು ಗಂಡು ಚಿರತೆಗಳಿವೆ. ಸಿಯಾ, ಸಶಾ, ಟಿಬಿಲಿಸಿ ಮತ್ತು ಸವನ್ನಾ ಎಂಬ ನಾಲ್ಕು ಹೆಣ್ಣು ಚಿರತೆಗಳೂ ಇವೆ.