ಬೆಂಗಳೂರು: ದಸರಾ ಹಬ್ಬದ ಹೊತ್ತಲ್ಲೇ ರಾಜ್ಯ ಸರ್ಕಾರದಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರಿಗೆ ಸಿಹಿ ಸುದ್ದಿ ನೀಡಲಾಗಿದೆ.
ನಿಗಮದ 65 ವರ್ಷಗಳ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ತಿಂಗಳ ಮೊದಲ ದಿನವೇ ಕೆಎಸ್ಆರ್ಟಿಸಿ ಸಿಬ್ಬಂದಿಗೆ ವೇತನ ನೀಡಲಾಗಿದೆ. ಇತಿಹಾಸದಲ್ಲಿ ತಿಂಗಳ ಮೊದಲ ದಿನ ಕೆಎಸ್ಆರ್ಟಿಸಿ ನೌಕರರಿಗೆ ವೇತನ ನೀಡಿರಲಿಲ್ಲ. 7 ನೇ ತಾರೀಕಿನಂದು ನೌಕರರ ಬ್ಯಾಂಕ್ ಖಾತೆಗೆ ವೇತನ ಜಮಾ ಮಾಡಲಾಗುತ್ತಿತ್ತು. ಆದರೆ, ಇದೇ ಮೊದಲ ಬಾರಿಗೆ ತಿಂಗಳ ಮೊದಲ ದಿನವೇ ಒಂದನೇ ತಾರೀಕಿನಂದು ವೇತನ ನೀಡಲಾಗಿದೆ ಎಂದು ಹೇಳಲಾಗಿದೆ.
ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್ ಅವರು ವೇತನ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಹತ್ವದ ಕ್ರಮ ಕೈಗೊಂಡಿದ್ದಾರೆ. ಕೆಎಸ್ಆರ್ಟಿಸಿ ಆರಂಭವಾದಾಗಿನಿಂದಲೂ ಒಂದನೇ ತಾರೀಖು ಅಧಿಕಾರಿಗಳಿಗೆ. ನಾಲ್ಕನೇ ತಾರೀಖು ಮೆಕಾನಿಕ್ ಗಳಿಗೆ, 7ನೇ ತಾರೀಖು ಚಾಲಕರು ಮತ್ತು ನಿರ್ವಾಹಕರಿಗೆ ಸಂಬಳ ನೀಡಲಾಗುತ್ತಿತ್ತು, ಈಗ ಮೊದಲ ಬಾರಿಗೆ ತಾರತಮ್ಯ ನಿವಾರಿಸಿ ಸೆಪ್ಟಂಬರ್ ತಿಂಗಳ ವೇತನವನ್ನು ಅಕ್ಟೋಬರ್ ಒಂದರಂದೇ ನೌಕರರ ಖಾತೆಗೆ ಜಮಾ ಮಾಡಲಾಗಿದ್ದು, ಕೆಎಸ್ಆರ್ಟಿಸಿ ಚಾಲಕರು ಮತ್ತು ನಿರ್ವಾಹಕರು ಸಂತಸ ವ್ಯಕ್ತಪಡಿಸಿದ್ದಾರೆ.