ಬೆಂಗಳೂರು; ರಾಮನಗರ ಜಿಲ್ಲೆ ಅಭಿವೃದ್ಧಿ ತಡೆಯಲು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಾಮಮಾರ್ಗ ಅನುಸರಿಸುತಿರುವುದು ಖಂಡನೀಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥನಾರಾಯಣ ವಾಗ್ದಾಳಿ ನಡೆಸಿದ್ದಾರೆ.
ಚನ್ನಪಟ್ಟಣದಲ್ಲಿ ಸಿ.ಪಿ. ಯೋಗೇಶ್ವರ್ ಗುದ್ದಲಿ ಪೂಜೆ ನೆರವೇರಿಸುವ ವೇಳೆ ಜೆಡಿಎಸ್ ಕಾರ್ಯಕರ್ತರಿಂದ ಪ್ರತಿಭಟನೆ, ಕಾರಿನ ಮೇಲೆ ಕಲ್ಲು ತೂರಾಟ ಪ್ರಕರಣದ ಬೆನ್ನಲ್ಲೇ ಕಿಡಿಕಾರಿರುವ ಸಚಿವ ಅಶ್ವತ್ಥನಾರಾಯಣ, ನಮ್ಮ ರಾಮನಗರ ಜಿಲ್ಲೆಯಲ್ಲಿ ನಮ್ಮ ಬಿಜೆಪಿ ಸರ್ಕಾರ ಮಾಡುತ್ತಿರುವ ಅಭಿವೃದ್ಧಿ ಕೆಲಸಗಳನ್ನು ತಡೆಯಲು ಹೆಚ್.ಡಿ. ಕುಮಾರಸ್ವಾಮಿ ‘ವಾಮಮಾರ್ಗ’ ಅನುಸರಿಸುತ್ತಿರುವುದು ಖಂಡನೀಯ. ‘ಅಧಿಕಾರವೂ ತಪ್ಪಬಾರದು, ಅಭಿವೃದ್ಧಿಯೂ ಆಗಬಾರದು’ ಎಂಬ ಸಿದ್ಧಾಂತಕ್ಕೆ ಕಟ್ಟುಬೀಳುವ ಬದಲು ನಾವು ಮಾಡುತ್ತಿರುವ ಜನಪರ ಕಾರ್ಯಗಳನ್ನು ಬೆಂಬಲಿಸಿ ಎಂದು ಹೇಳಿದ್ದಾರೆ.
ಹಿಂದೆಂದೂ ಕಾಣದಷ್ಟು ಅಭಿವೃದ್ಧಿ ಕಾರ್ಯಗಳು ಜಿಲ್ಲೆಯಲ್ಲಿ ನಮ್ಮ ಸರ್ಕಾರದ ಅವಧಿಯಲ್ಲಿ ನಡೆಯುತ್ತಿದೆ. ಈ ವಿಚಾರ ಕುಮಾರಸ್ವಾಮಿಯವರಿಗೆ ಗೊತ್ತಿದೆ. ಆತ್ಮಸಾಕ್ಷಿಗೆ ವಿರುದ್ಧವಾಗಿ ದ್ವೇಷದ ರಾಜಕಾರಣ ಮಾಡುವುದು ಬೇಡ ಎಂದು ಸಲಹೆ ನೀಡಿದ್ದಾರೆ.