ಭಾರಿ ಮಳೆಗೆ ಬೆಂಗಳೂರಿನ ರಸ್ತೆಗಳು ಹಾಗೂ ಬಡಾವಣೆಗಳಲ್ಲಿ ನೀರು ತುಂಬಿಕೊಂಡ ಘಟನೆ ಬಳಿಕ ಎಚ್ಚೆತ್ತುಕೊಂಡಿದ್ದ ಮಹಾನಗರ ಪಾಲಿಕೆ ರಾಜ ಕಾಲುವೆಗಳ ಮೇಲೆ ನಿರ್ಮಾಣಗೊಂಡಿರುವ ಅಕ್ರಮ ಕಟ್ಟಡಗಳ ತೆರವಿಗೆ ಮುಂದಾಗಿತ್ತು.
ಆ ಸಂದರ್ಭದಲ್ಲಿ ವಿಧಾನಸಭೆಯ ಉಭಯ ಸದನಗಳ ಕಲಾಪ ನಡೆಯುತ್ತಿದ್ದು, ಒತ್ತುವರಿ ತೆರವು ಕಾರ್ಯಾಚರಣೆಯೂ ಚುರುಕು ಪಡೆದುಕೊಂಡಿತ್ತು. ಬಡವರು ಹಾಗೂ ಮಧ್ಯಮ ವರ್ಗಕ್ಕೆ ಸೇರಿದವರ ಕಟ್ಟಡಗಳು ತೆರವುಗೊಂಡಿದ್ದವು.
ಇದಾದ ಬಳಿಕ ಪ್ರಭಾವಿಗಳಿಗೆ ಸೇರಿದ ಕಟ್ಟಡಗಳು ಒತ್ತುವರಿ ತೆರವು ಕಾರ್ಯಾಚರಣೆ ವ್ಯಾಪ್ತಿಗೆ ಬಂದಿದ್ದು, ಅಷ್ಟರಲ್ಲಾಗಲೇ ವಿಧಾನಸಭಾ ಅಧಿವೇಶನವೂ ಮುಗಿದಿತ್ತು. ಇದಾದ ಬಳಿಕ ಬಿಬಿಎಂಪಿ, ಜೆಸಿಬಿ ಹಾಗೂ ಬುಲ್ಡೋಜರ್ಗಳು ಸ್ತಬ್ಧಗೊಂಡಿದ್ದವು.
ಹೀಗಾಗಿ ಒತ್ತುವರಿ ತೆರವು ಕಾರ್ಯಾಚರಣೆ ಕೇವಲ ಬಡ ಮತ್ತು ಮಧ್ಯಮ ವರ್ಗದವರಿಗೆ ಮಾತ್ರ ಸೀಮಿತವಾಗಿದೆಯಾ ಎಂಬ ಪ್ರಶ್ನೆ ಕೇಳಿ ಬಂದಿತ್ತು. ಇದರ ಮಧ್ಯ ಇದೀಗ ಹೈಕೋರ್ಟ್ ಒತ್ತುವರಿ ತೆರವು ಕಾರ್ಯಾಚರಣೆ ವಿಳಂಬವಾಗುತ್ತಿರುವುದಕ್ಕೆ ಚಾಟಿ ಬೀಸಿದೆ.
602 ಒತ್ತುವರಿ ಬಾಕಿ ಇದೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದರೂ ಸಹ ಕೇವಲ ಹತ್ತು ಒತ್ತುವರಿಗಳನ್ನು ತೆರವುಗೊಳಿಸಿ, ಉಳಿದವುಗಳಿಗೆ ವಿಳಂಬ ಮಾಡುತ್ತಿರುವುದಕ್ಕೆ ಸಹಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಕಿಡಿ ಕಾರಿದೆ. ಅಲ್ಲದೆ ಅಕ್ಟೋಬರ್ 25ರೊಳಗೆ ಬಾಕಿ ಉಳಿದ ಒತ್ತುವರಿ ತೆರವು ಮಾಡಿ ಎಂದು ಬಿಬಿಎಂಪಿಗೆ ತಾಕೀತು ಮಾಡಿದೆ.