‘ಪ್ರಿನ್ಸ್ ಆಫ್ ಕೋಲ್ಕತ್ತಾ’, ಭಾರತ್ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಮೇಲಿನ ಕ್ರೇಜ್ ಇನ್ನೂ ಕಡಿಮೆಯಾಗಿಲ್ಲ. ಇದಕ್ಕೆ ಪಶ್ಚಿಮ ಬಂಗಾಳದ ದುರ್ಗಾ ಪೆಂಡಾಲ್ ಸಾಕ್ಷಿ.
ಮಿತಾಲಿ ಸಂಘದ ದುರ್ಗಾ ಪೆಂಡಾಲ್ನಲ್ಲಿ ಗಂಗೂಲಿ ಪ್ರತಿಕೃತಿ ಮಾಡಿಡಲಾಗಿದೆ. ಲಾರ್ಡ್ಸ್ ಪೆವಿಲಿಯನ್ನಲ್ಲಿ 2002 ರಲ್ಲಿ ಕ್ರಿಕೆಟ್ ಇತಿಹಾಸದ ಅತ್ಯಂತ ಅಪರೂಪದ ಸಂಭ್ರಮಾಚರಣೆಯ ಮರುಸೃಷ್ಟಿ ಮಾಡಿದ್ದು, ಅದು ಗಮನ ಸೆಳೆಯುತ್ತಿದೆ.
ಜುಲೈ 2002ರಲ್ಲಿ ‘ಕ್ರಿಕೆಟ್ನ ತವರು’ ಎಂದೂ ಕರೆಯಲ್ಪಡುವ ಲಾರ್ಡ್ಸ್ನಲ್ಲಿ ಯುವರಾಜ್ ಸಿಂಗ್ (69) ಮತ್ತು ಮೊಹಮ್ಮದ್ ಕೈಫ್ (87*) ಜೊತೆಯಾಟದ ಕಾರಣಕ್ಕೆ ನ್ಯಾಟ್ವೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ನೀಡಿದ್ದ 326 ರನ್ಗಳ ದೊಡ್ಡ ಗುರಿಯನ್ನು ಬೆನ್ನಟ್ಟಿದ ಭಾರತ ಗೆಲುವಿನ ನಗೆ ಬೀರಿತ್ತು. ಈ ವೇಳೆ ಗಂಗೂಲಿ ತಮ್ಮ ಅಂಗಿಯನ್ನು ತೆಗೆದು ಬಾಲ್ಕನಿಯಿಂದ ತಿರುಗಿಸುತ್ತಾ ಸಂಭ್ರಮಿಸಿದ್ದರು.
ಈ ಹಿಂದೆ ಭಾರತದ ಮತ್ತೊಂದು ಐಕಾನಿಕ್ ಕ್ರಿಕೆಟ್ ಸ್ಥಳವಾದ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಭಾರತದ ವಿರುದ್ಧ ಗೆಲುವಿನ ನಂತರ ಇಂಗ್ಲಿಷ್ ಆಲ್ರೌಂಡರ್ ಆಂಡ್ರ್ಯೂ ಫ್ಲಿಂಟಾಫ್ ಶರ್ಟ್ ಬಿಚ್ಚಿ ತಿರುಗಿಸಿದ್ದರು, ಈ ಕೃತ್ಯಕ್ಕೆ ಗಂಗೂಲಿ ಪ್ರತಿಕ್ರಿಯೆಯಾಗಿತ್ತು.
ಈ ಐಕಾನಿಕ್ ಸ್ಥಳದ ಪೆವಿಲಿಯನ್ ಅನ್ನು ಆಧರಿಸಿದ ದುರ್ಗಾ ಪೂಜೆಯ ಮಂಟಪವು ಅದರ ನೆನಪುಗಳನ್ನು ಅಭಿಮಾನಿಗಳಿಗೆ ಮರುಕಳಿಸುವಂತೆ ಮಾಡಿತು.
ಈ ಘಟನೆ ನಡೆದ ಎರಡು ದಶಕಗಳ ನಂತರ ಈಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ ದುರ್ಗಾ ಪೆಂಡಾಲನ್ನು ಉದ್ಘಾಟಿಸಲು ಬಂದಿದ್ದು ವಿಶೇಷವೆನಿಸಿತ್ತು.