ಕೇಂದ್ರ ಸರ್ಕಾರ ಪಾಪ್ಯುಲರ್ ಪ್ರಂಟ್ ಆಫ್ ಇಂಡಿಯಾ ಹಾಗೂ ಅದರ ಅಂಗ ಸಂಸ್ಥೆಗಳನ್ನು ಐದು ವರ್ಷಗಳ ಕಾಲ ನಿಷೇಧಿಸಿದ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ವಾಗ್ವಾದ ತಾರಕಕ್ಕೇರಿದೆ.
ಸಿದ್ದರಾಮಯ್ಯನವರ ಸರ್ಕಾರ ಅಧಿಕಾರದಲ್ಲಿದ್ದಾಗ ಪಿಎಫ್ಐ ವಿರುದ್ಧದ ಸಾವಿರಾರು ಪ್ರಕರಣಗಳನ್ನು ಕೈ ಬಿಡಲಾಗಿತ್ತು ಎಂದು ಬಿಜೆಪಿ ಆರೋಪಿಸಿದ್ದರೆ, ನಾನು ಯಾವುದೇ ಪ್ರಕರಣಗಳನ್ನು ಹಿಂದೆ ಪಡೆದಿಲ್ಲ. ಬಿಜೆಪಿ ಸರ್ಕಾರವೇ ಈ ಉತ್ತರವನ್ನು ತಮಗೆ ನೀಡಿದೆ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಇದರ ಮಧ್ಯೆ ಶಿವಮೊಗ್ಗದಲ್ಲಿ ಮಾತನಾಡಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಿದ್ದರಾಮಯ್ಯನವರ ಪಾಪದ ಕೂಸು ಎಂದು ಹೇಳಿರುವುದಕ್ಕೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಆರ್ ಎಸ್ ಎಸ್ ಬಿಜೆಪಿಯ ಪಾಪದ ಕೂಸು ಎಂದು ಟಾಂಗ್ ನೀಡಿದ್ದಾರೆ.