ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಮಹಿಳೆಯೊಬ್ಬರು ಅಪಘಾತಕ್ಕೆ ಬಲಿಯಾಗಿದ್ದು, ಇದರ ಭೀಕರ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಘಟನೆ ಹೈದರಾಬಾದ್ ಸಮೀಪದ ಮೇದ್ಚಲ್ ನಲ್ಲಿ ಸೆಪ್ಟೆಂಬರ್ 29ರ ಗುರುವಾರ ಬೆಳಿಗ್ಗೆ ನಡೆದಿದೆ.
35 ವರ್ಷದ ಪ್ರಿಯಾ ಮೃತಪಟ್ಟ ಮಹಿಳೆಯಾಗಿದ್ದು, ಖಾಸಗಿ ಸಂಸ್ಥೆಯೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದ ಈಕೆ ಕೆಲಸಕ್ಕೆ ತೆರಳುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಗುರುವಾರ ಬೆಳಗ್ಗೆ ಏಳು ಗಂಟೆ ಸುಮಾರಿಗೆ ಮುಖ್ಯ ರಸ್ತೆಯಲ್ಲಿ ಹೋಗುತ್ತಿದ್ದ ಪ್ರಿಯಾ ವಿಭಜಕದ ಬಳಿ ಮತ್ತೊಂದು ಬದಿಗೆ ಹೋಗಲು ಮುಂದಾಗಿದ್ದಾರೆ.
ಈ ಸಂದರ್ಭದಲ್ಲಿ ಅತಿ ವೇಗವಾಗಿ ಬಂದ ಟ್ರಕ್ ಆಕೆಯ ಮೇಲೆ ಹರಿದಿದ್ದು, ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಟ್ರಕ್ ಚಾಲಕ ಅಪಘಾತ ತಪ್ಪಿಸಲು ಯತ್ನಿಸಿದರೂ ಸಹ ಸಾಧ್ಯವಾಗಿಲ್ಲ. ಪ್ರಿಯಾ ಕೂಡಾ ರಸ್ತೆ ದಾಟಲು ಮುಂದಾದ ವೇಳೆ ದೊಡ್ಡ ಟರ್ನ್ ತೆಗೆದುಕೊಂಡಿರುವುದು ಅಪಘಾತಕ್ಕೆ ಮತ್ತೊಂದು ಕಾರಣವಾಗಿದೆ. ಇದೀಗ ಟ್ರಕ್ ಚಾಲಕನ ವಿರುದ್ಧ ನಿರ್ಲಕ್ಷ್ಯದ ಚಾಲನೆ ಕಾರಣಕ್ಕೆ ಪ್ರಕರಣ ದಾಖಲಾಗಿದೆ.