ಮೊಬೈಲ್ ಸಿಮ್ ಕಾರ್ಡ್ ಪಡೆಯಲು ನಕಲಿ ದಾಖಲೆಗಳನ್ನು ಒದಗಿಸುವುದು ಅಥವಾ ವಾಟ್ಸಾಪ್, ಟೆಲಿಗ್ರಾಮ್ನಂತಹ OTT ಪ್ಲಾಟ್‌ಫಾರ್ಮ್‌ಗಳಲ್ಲಿ ತಪ್ಪಾದ ವಿವರಗಳನ್ನು ಒದಗಿಸಿದ್ರೆ ತೊಂದರೆಗೆ ಸಿಲುಕಿಕೊಳ್ಳೋದು ಗ್ಯಾರಂಟಿ. ಯಾಕಂದ್ರೆ ಭಾರತೀಯ ದೂರಸಂಪರ್ಕ ಮಸೂದೆ 2022ರ ಕರಡು ನಿಯಮದ ಪ್ರಕಾರ, ನೀವೇನಾದ್ರೂ ಇಂತಹ ತಪ್ಪುಗಳನ್ನು ಮಾಡಿದ್ರೆ ಒಂದು ವರ್ಷ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ಅಥವಾ 50,000 ರೂಪಾಯಿ ದಂಡವನ್ನು ಪಾವತಿಸಬೇಕಾಗುತ್ತದೆ.
ಆನ್‌ಲೈನ್ ವಂಚನೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕರಡು ಮಸೂದೆಯಲ್ಲಿ ಹೊಸ ನಿಬಂಧನೆಗಳನ್ನು ಉಲ್ಲೇಖಿಸಲಾಗಿದೆ. ಟೆಲಿಕಾಂ ಸೇವೆಗಳನ್ನು ಬಳಸಿಕೊಂಡು ಸೈಬರ್ ವಂಚನೆಗಳನ್ನು ತಡೆಯಲು ಇದು ಸಹಾಯ ಮಾಡುತ್ತದೆ. ಆದ್ದರಿಂದ ಗುರುತಿಗೆ ಸಂಬಂಧಿಸಿದ ನಿಬಂಧನೆಗಳನ್ನು ಸಂಬಂಧಿತ ಸ್ಥಳಗಳಲ್ಲಿ ಬಿಲ್‌ನಲ್ಲಿ ಸೇರಿಸಲಾಗಿದೆ.
ಭಾರತದ ಟೆಲಿಕಾಂ ಬಿಲ್ ಕರಡು 2022ರಲ್ಲಾದ ಬದಲಾವಣೆಗಳು…
ಭಾರತೀಯ ದೂರಸಂಪರ್ಕ ಮಸೂದೆ 2022ರ ಕರಡಿನಲ್ಲಿ ಬರೆದಿರುವಂತೆ ಮೆಟಾ-ಮಾಲೀಕತ್ವದ WhatsApp, Zoom ಮತ್ತು Google Duo ಅನ್ನು ದೂರಸಂಪರ್ಕ ಪರವಾನಗಿಯ ವ್ಯಾಪ್ತಿಯಲ್ಲಿ ತರಲು ಕೇಂದ್ರವು ಪ್ರಸ್ತಾಪಿಸಿದೆ. ಆದಾಗ್ಯೂ, ಕೇಂದ್ರ ಅಥವಾ ರಾಜ್ಯ ಸರ್ಕಾರಗಳಿಗೆ ಮಾನ್ಯತೆ ಪಡೆದ ವರದಿಗಾರರ ಭಾರತದಲ್ಲಿ ಪ್ರಕಟಿಸಲು ಉದ್ದೇಶಿಸಿರುವ ಪತ್ರಿಕಾ ಸಂದೇಶಗಳಿಗೆ ತಡೆಹಿಡಿಯದಂತೆ ವಿನಾಯಿತಿ ನೀಡಲು ಸರ್ಕಾರವು ಪ್ರಸ್ತಾಪಿಸಿದೆ.
“ದೂರಸಂಪರ್ಕ ಸೇವೆಗಳು ಮತ್ತು ದೂರಸಂಪರ್ಕ ನೆಟ್‌ವರ್ಕ್‌ಗಳನ್ನು ಒದಗಿಸಲು, ಒಂದು ಘಟಕವು ಪರವಾನಗಿಯನ್ನು ಪಡೆಯಬೇಕು” ಎಂದು ಕರಡಿನಲ್ಲಿ ಹೇಳಲಾಗಿದೆ. ಮತ್ತೊಂದು ಮಹತ್ವದ ಷರತ್ತಿನಲ್ಲಿ ಕರಡು ಮಸೂದೆಯು ಟೆಲಿಕಾಂ ಮತ್ತು ಇಂಟರ್ನೆಟ್ ಸೇವಾ ಪೂರೈಕೆದಾರರ ಶುಲ್ಕ ಮತ್ತು ದಂಡವನ್ನು ಮನ್ನಾ ಮಾಡಲು ಪ್ರಸ್ತಾಪಿಸಿದೆ. ಯಾವುದೇ ಸಾರ್ವಜನಿಕ ತುರ್ತು ಪರಿಸ್ಥಿತಿಯಲ್ಲಿ ಅಥವಾ ಸಾರ್ವಜನಿಕ ಸುರಕ್ಷತೆ, ಸಾರ್ವಭೌಮತೆ, ಸಮಗ್ರತೆ ಅಥವಾ ಭಾರತದ ಭದ್ರತೆ, ವಿದೇಶಗಳೊಂದಿಗೆ ಸೌಹಾರ್ದ ಸಂಬಂಧಗಳು, ಸಾರ್ವಜನಿಕ ಸುವ್ಯವಸ್ಥೆ, ಅಥವಾ ಅಪರಾಧಕ್ಕೆ ಪ್ರಚೋದನೆ ಕೊಡುವಂತಹ ಪತ್ರಿಕಾ ಸಂದೇಶಗಳಿಗೆ ವಿನಾಯಿತಿ ನೀಡಲಾಗುವುದಿಲ್ಲ ಎಂದು ಕರಡು ಪ್ರತಿಯಲ್ಲಿ ಸ್ಪಷ್ಟಪಡಿಸಲಾಗಿದೆ.
ಕರಡು ಮಸೂದೆಯನ್ನು ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ್ದಾರೆ. ಈ ಬಗ್ಗೆ ಸಾರ್ವಜನಿಕರ ಅಭಿಪ್ರಾಯವನ್ನೂ ಕೇಳಲಾಗಿದೆ. ಅಭಿಪ್ರಾಯ ಹಂಚಿಕೊಳ್ಳಲು ಅಕ್ಟೋಬರ್ 20 ಕೊನೆಯ ದಿನಾಂಕ. ಇಂಟರ್ನೆಟ್ ಅಥವಾ ಟೆಲಿಕಾಂ ಸೇವಾ ಪೂರೈಕೆದಾರರು ಪರವಾನಗಿಯನ್ನು ಒಪ್ಪಿಸಿದರೆ ಶುಲ್ಕವನ್ನು ಮರುಪಾವತಿಸಲು ಕರಡಿನಲ್ಲಿ ಪ್ರಸ್ತಾಪಿಸಲಾಗಿದೆ.
ಯಾವುದೇ ಪರವಾನಗಿ ಹೊಂದಿರುವವರು ಅಥವಾ ನೋಂದಾಯಿತ ಘಟಕದ ಅಡಿಯಲ್ಲಿ ಕೇಂದ್ರವು “ಪ್ರವೇಶ ಶುಲ್ಕಗಳು, ಪರವಾನಗಿ ಶುಲ್ಕಗಳು, ನೋಂದಣಿ ಶುಲ್ಕಗಳು ಅಥವಾ ಯಾವುದೇ ಇತರ ಶುಲ್ಕಗಳು, ಬಡ್ಡಿ, ಹೆಚ್ಚುವರಿ ಶುಲ್ಕಗಳು ಅಥವಾ ದಂಡವನ್ನು ಭಾಗಶಃ ಅಥವಾ ಪೂರ್ಣವಾಗಿ ಮನ್ನಾ ಮಾಡಬಹುದು ಎಂದು ಕರಡು ಮಸೂದೆ ಹೇಳುತ್ತದೆ.