ಸಾಂಕ್ರಾಮಿಕ ಕೊರೊನಾ ಕಾರಣಕ್ಕಾಗಿ ಕಳೆದ ಎರಡು ವರ್ಷಗಳಿಂದ ಕಳೆಗುಂದಿದ್ದ ಮೈಸೂರು ದಸರಾ, ಈ ಬಾರಿ ಅದ್ದೂರಿ ಆಚರಣೆಯಿಂದಾಗಿ ಮತ್ತೆ ತನ್ನ ಎಂದಿನ ವೈಭವವನ್ನು ಪಡೆದುಕೊಂಡಿದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಸಂಭ್ರಮ ಮನೆ ಮಾಡಿದ್ದು ಎಲ್ಲೆಡೆ ಸಡಗರದ ವಾತಾವರಣ ಕಂಡುಬರುತ್ತಿದೆ.
ಆದರೆ ಇದರ ಮಧ್ಯೆ ಸರ್ಕಾರದ ವತಿಯಿಂದ ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮಗಳಲ್ಲಿ ಹಲವು ಯಡವಟ್ಟುಗಳು ಕಂಡುಬರುತ್ತಿವೆ ಎಂಬ ಆರೋಪ ಕೇಳಿ ಬರುತ್ತಿದೆ. ದಸರಾ ಕವಿಗೋಷ್ಠಿಯಲ್ಲಿ ಮೃತಪಟ್ಟವರ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಅಚ್ಚು ಹಾಕಿಸಿ ಮುಜುಗರಕ್ಕೊಳಗಾದ ಬೆನ್ನಲ್ಲೇ ಈಗ ಮತ್ತೊಂದು ಘಟನೆ ನಡೆದಿದೆ.
ಹೌದು, ದಸರಾ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಸಲುವಾಗಿ ದೂರದ ಬೀದರ್ ನಿಂದ ಆಗಮಿಸಿದ್ದ ಕುಸ್ತಿಪಟುಗಳು ಸಕಾಲಕ್ಕೆ ಊಟ, ವಸತಿ ಸಿಗದೇ ಪರದಾಡಿದ್ದಾರೆ. ಇಂದಿನಿಂದ ದಸರಾ ಕ್ರೀಡಾಕೂಟ ಆರಂಭವಾಗುತ್ತಿದ್ದು, ಬೀದರ್ ನ ಮೂವರು ಮಹಿಳಾ ಹಾಗೂ ಮೂವರು ಪುರುಷ ಕುಸ್ತಿಪಟುಗಳು ಬುಧವಾರ ಬೆಳಿಗ್ಗೆ 11 ಗಂಟೆಗೆ ರೈಲಿನ ಮುಖಾಂತರ ಆಗಮಿಸಿದ್ದರು.
ಇವರುಗಳು ತಮಗೆ ವಸತಿ ಕಲ್ಪಿಸುವ ಸಲುವಾಗಿ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಗೆ ತೆರಳಿದ ವೇಳೆ, ಅವರನ್ನು ಕೇಳಿ ಇವರನ್ನು ಕೇಳಿ ಎಂದು ಸಾಗಹಾಕಲಾಗಿದೆ ಹೊರತು ಯಾವುದೇ ವ್ಯವಸ್ಥೆ ಕಲ್ಪಿಸಿಕೊಟ್ಟಿಲ್ಲ.
ವಸತಿ ವ್ಯವಸ್ಥೆ ಆದ ಬಳಿಕ ಊಟ ಮಾಡೋಣವೆಂದು ಇದ್ದ ಕಾರಣ ಹಸಿವಿನಿಂದಲೇ ಕಾಲ ಕಳೆಯುವಂತಾಗಿದೆ. ಕೊನೆಗೂ ರಾತ್ರಿ 9:00 ಗಂಟೆ ಸುಮಾರಿಗೆ ಇವರುಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ. ಇದೇ ಪರಿಸ್ಥಿತಿ ಬೆಂಗಳೂರಿನ ಕ್ರೀಡಾಪಟುಗಳಿಗೂ ಎದುರಾಗಿತ್ತು ಎನ್ನಲಾಗಿದೆ.