ನವರಾತ್ರಿ ಹಬ್ಬದ ದಿನ ಒಂಬತ್ತು ದಿನ ನವದುರ್ಗೆಯರಿಗೆ ವಿಶೇಷ ಪೂಜೆ ನಡೆಯುತ್ತೆ. ಕೇವಲ ದಕ್ಷಿಣ ಭಾರತದಲ್ಲಿ ಮಾತ್ರ ಅಲ್ಲ, ಉತ್ತರ ಭಾರತದವರು ಸಹ ನವರಾತ್ರಿ ಹಬ್ಬವನ್ನ ಬಲು ವಿಜೃಂಭಣೆಯಿಂದ ಆಚರಿಸುತ್ತಾರೆ. ಅದರಲ್ಲೂ ಕೋಲ್ಕತ್ತಾ, ಪಶ್ಚಿಮಬಂಗಾಳದ ಜನರಿಗಂತೂ ಈ ದುರ್ಗಾ ಹಬ್ಬ ಇನ್ನಷ್ಟು ವಿಶೇಷವಾಗಿರುತ್ತೆ.
ಇಲ್ಲಿನ ಮಣ್ಣಿನಿಂದ ದುರ್ಗೆಯ ಮೂರ್ತಿಗೆ ರೂಪ ಕೊಡಲಾಗುತ್ತೆ. ಅಷ್ಟೇ ಅಲ್ಲ ಅದೇ ದುರ್ಗಾ ಮೂರ್ತಿಯನ್ನ ಪ್ರತಿಷ್ಠಾಪಿಸಿ ಒಂಬತ್ತು ದಿನಗಳ ಕಾಲ ಪೂಜೆ ಮಾಡಲಾಗುತ್ತೆ. ದುರ್ಗೆ ಅಂದರೆ ವಿಶೇಷ ಭಯ ಭಕ್ತಿ ಇಲ್ಲಿನ ಜನರಿಗೆ. ಈಗ ಇದೇ ಹಬ್ಬದ ವಿಶೇಷ ದಿನದಂದು ದುರ್ಗಾ ದೇವಿಯ ಭಕ್ತ, ದೀಪಾಂಕರ ಸಹಾ ಅನ್ನೊ ಕಲಾವಿದ ವಿಶೇಷ ರೀತಿಯಲ್ಲಿ ದುರ್ಗಾ ದೇವಿಯ ಚಿತ್ರವನ್ನ ಬಿಡಿಸಿದ್ದಾರೆ. ಇದಕ್ಕೆ ಅವರು ‘ಚಿನಮೋಯಿ ಮಾ‘ ಎಂದು ಹೆಸರಿಟ್ಟಿದ್ದಾರೆ.
ಪಶ್ಚಿಮ ಬಂಗಾಳದ ಅಲಿಪುರ್ದಾರ್ ಜಿಲ್ಲೆಯ ಬೋಲಾರ್ ದಾಬ್ರಿ ಪ್ರದೇಶದ ಕಲಾವಿದರಾಗಿರುವ ದೀಪಾಂಕರ ಇವರು 1600 ಅಂಗಿಯ ಬಟನ್(ಗುಂಡಿ)ಗಳನ್ನು ಬಳಸಿಕೊಂಡು ದುರ್ಗಾ ಮಾತೆಯ ಭಾವಚಿತ್ರವನ್ನ ಬಿಡಿಸಿದ್ದಾರೆ.
ಈ ಭಾವಚಿತ್ರ 24 ಇಂಚು ಉದ್ದ ಮತ್ತು 18 ಇಂಚು ಅಗಲವಿದೆ. ಈ ದುರ್ಗೆಯ ಭಾವಚಿತ್ರ ಬಿಡಿಸಲು ಅನೇಕ ಬಣ್ಣದ ಬಟನ್ಗಳನ್ನ ಬಳಸಿಕೊಳ್ಳಲಾಗಿದೆ. ಈ ಹಿಂದೆ ಅನೇಕ ಕಲಾವಿದರು ಹಬ್ಬದ ಸಂದರ್ಭದಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್, ಸಿಮೆಂಟ್ ಮತ್ತು ಸಾಬೂನಿನಿಂದ ವಿವಿಧ ಶಿಲ್ಪಗಳನ್ನು ಮಾಡಿದ್ದಾರೆ. ಈ ವರ್ಷ ದೀಪಾಂಕರ ಅವರು ಹೀಗೆ ಬಟನ್ಗಳಿಂದ ಮಾಡಿದ ದುರ್ಗಾ ದೇವಿಯ ಚಿತ್ರ ಎಲ್ಲರ ಗಮನ ಸೆಳೆದಿದೆ. ಎಲ್ಲರೂ ಈ ಚಿತ್ರವನ್ನ ನೋಡಿ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.