ಯಾದಗಿರಿ: ಯಾದಗಿರಿಯಲ್ಲಿ ಸಿಡಿಲು ಬಡಿದು ನಾಲ್ವರು ಸಾವನ್ನಪ್ಪಿದ್ದಾರೆ. ತಾಯಿ, ಇಬ್ಬರು ಮಕ್ಕಳು ಹಾಗೂ ಮತ್ತೊಬ್ಬ ಯುವಕ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಮತ್ತೊಬ್ಬರು ಗಾಯಗೊಂಡಿದ್ದಾರೆ.
ಗಾಜರಕೋಟ ಗ್ರಾಮದ ಮೋನಮ್ಮ(25), ಮಕ್ಕಳಾದ ಭಾನು(4), ಶ್ರೀನಿವಾಸ(2) ಹಾಗೂ ಎಸ್. ಹೊಸಹಳ್ಳಿ ಸಾಬಣ್ಣ(17) ಮೃತಪಟ್ಟವರು ಎಂದು ಹೇಳಲಾಗಿದೆ. ಮಳೆಯಿಂದಾಗಿ ಮರದ ಕೆಳಗೆ ನಿಂತುಕೊಂಡಿದ್ದ ವೇಳೆ ಸಿಡಿಲು ಬಡಿಲು ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಯಾದಗಿರಿ ಆಸ್ಪತ್ರೆಗೆ ತೆರಳಿ ವಾಪಸ್ ಬರುವಾಗ ಗುರುಮಠಕಲ್ ತಾಲ್ಲೂಕಿನ ಎಸ್. ಹೊಸಹಳ್ಳಿ ಸಮೀಪ ದುರ್ಘಟನೆ ಸಂಭವಿಸಿದೆ. ಮರದ ಕೆಳಗೆ ನಿಂತಿದ್ದಾಗಲೇ ಬಂದೆರಗಿದ ಸಿಡಿಲಿಗೆ ಮೋನಮ್ಮ, ಇಬ್ಬರು ಮಕ್ಕಳು ಹಾಗೂ ಯುವಕ ಮೃತಪಟ್ಟಿದ್ದಾರೆ. ಅವರೊಂದಿಗೆ ಇದ್ದ ಮೋನಮ್ಮ ಅವರ ಮೈದುನ ಭೀಮಾಶಂಕರ ಸ್ಥಿತಿ ಗಂಭೀರವಾಗಿದ್ದು, ಗಾಯಾಳುವನ್ನು ಯಾದಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುರುಮಠಕಲ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.