ಇಂದು ನವರಾತ್ರಿಯ ಮೂರನೇ ದಿನ ದೇವಿಯನ್ನು ಚಂದ್ರಘಂಟಾ ಸ್ವರೂಪದಲ್ಲಿ ಪೂಜಿಸಲಾಗುತ್ತದೆ. ಈ ಅವತಾರದಲ್ಲಿ ದೇವಿಯ ಹಣೆಯ ಮೇಲೆ ಘಂಟೆಯಾಕಾರದ ಅರ್ಧ ಚಂದ್ರನಿದ್ದಾನೆ. ಹೀಗಾಗಿ ದೇವಿಯನ್ನು ಚಂದ್ರಘಂಟಾದೇವಿ ಎಂದು ಪೂಜಿಸಲಾಗುತ್ತದೆ.
ಚಂದ್ರಘಂಟಾ ಅವತಾರದಲ್ಲಿ ದೇವಿಯ ದೇಹವು ಬಂಗಾರದ ಬಣ್ಣದಂತೆ ಹೊಳೆಯುತ್ತಿದ್ದು ಹತ್ತು ಕೈಗಳಿವೆ. ಹಾಗೇ ಈ ಹತ್ತು ಕೈಗಳಲ್ಲೂ ದೇವಿ ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡಿದ್ದಾಳೆ. ಈ ಅವತಾರದಲ್ಲಿ ದೇವಿಯು ದುಷ್ಟರನ್ನು ನಿಗ್ರಹಿಸಿ ತನ್ನ ಭಕ್ತರನ್ನು ಪೊರೆಯುತ್ತಾಳೆ.
ದಾಳಿಂಬೆ ಬಣ್ಣದ ವಸ್ತ್ರವನ್ನು ದೇವಿಗೆ ಉಡಿಸಿದರೆ ಒಳ್ಳೆಯದು, ಮನೆಯ ಗೃಹಿಣಿಯರು ಕೂಡ ದಾಳಿಂಬೆ ಬಣ್ಣದ ಸೀರೆ ಉಟ್ಟುಕೊಂಡರೆ ದೇವಿ ಪ್ರಸನ್ನಳಾಗುತ್ತಾಳಂತೆ. ಹಾಗೇ ದೇವಿಗೆ ಹಾಲು ಬಳಸಿ ಮಾಡಿದ ಸಿಹಿ ತಿನಿಸು, ಪಾಯಸವನ್ನು ಅರ್ಪಿಸಿದರೆ ಸಕಲ ಇಷ್ಟಾರ್ಥಗಳನ್ನು ಪೂರೈಸಿ ಸುಖ ಶಾಂತಿ ನೀಡುತ್ತಾಳಂತೆ. ದೇವಿಯ ಪೂಜೆ ಮಾಡುವಾಗ ಶ್ರದ್ಧಾ ಭಕ್ತಿಯಿಂದ ಪೂಜಿಸಬೇಕು. ಇದರಿಂದ ಜ್ಞಾನ ಸಂಪತ್ತು ಹೆಚ್ಚಾಗುತ್ತದೆ.