ದೇಶದಲ್ಲಿ ಸಂಸ್ಕೃತ ಭಾಷೆಯ ಕುರಿತು ಚರ್ಚೆಗಳು ನಡೆದಿರುವಾಗಲೇ ಮಾಹಿತಿ ಹಕ್ಕು ಕಾಯ್ದೆ ಅಡಿ ಸಲ್ಲಿಸಲಾಗಿದ್ದ ಅರ್ಜಿಯಲ್ಲಿ ಮಹತ್ವದ ಮಾಹಿತಿಯೊಂದು ಬಹಿರಂಗವಾಗಿದೆ. 2011ರ ಸೆನ್ಸಸ್ ಪ್ರಕಾರ ದೇಶದಲ್ಲಿ ಕೇವಲ 24,821 ಮಂದಿ ಮಾತ್ರ (ಅಂದರೆ ದೇಶದ ಜನಸಂಖ್ಯೆಯ ಶೇ. 0.002) ನಿರರ್ಗಳವಾಗಿ ಸಂಸ್ಕೃತ ಮಾತನಾಡಬಲ್ಲರು ಎಂದು ತಿಳಿಸಲಾಗಿದೆ.
ಆಗ್ರಾ ಮೂಲದ ಸರ್ಜನ್ ಹಾಗೂ ಸಾಮಾಜಿಕ ಕಾರ್ಯಕರ್ತ ಡಾ. ದೇವಶಿಶ್ ಭಟ್ಟಾಚಾರ್ಯ ಎಂಬವರು, ಕೇಂದ್ರ ಗೃಹ ಸಚಿವಾಲಯಕ್ಕೆ ಈ ಕುರಿತ ಮಾಹಿತಿ ಕೋರಿ ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿದ್ದು, ಇದಕ್ಕೆ ಸೆನ್ಸಸ್ ಕಮಿಷನರ್ ಕಚೇರಿಯ ರಿಜಿಸ್ಟ್ರಾರ್ ಜನರಲ್ ಅವರು ಉತ್ತರಿಸಿದ್ದಾರೆ.
ಹಾಗೆಯೇ ಬಿಹಾರ, ಉತ್ತರ ಪ್ರದೇಶ, ಹಾಗೂ ಪಂಜಾಬ್ ಸೇರಿದಂತೆ ಭಾರತದ ಅತ್ಯಧಿಕ ಮಂದಿ ಹಿಂದಿ ಮಾತನಾಡುವುದರ ಜೊತೆಗೆ ಅರ್ಥ ಮಾಡಿಕೊಳ್ಳಬಲ್ಲರು ಎಂದು ಮಾಹಿತಿ ನೀಡಲಾಗಿದೆ. ಸಂಸ್ಕೃತವನ್ನು ಭಾರತದ 22 ಅಧಿಕೃತ ಭಾಷೆಗಳ ಪೈಕಿ ಒಂದು ಎಂದು ಪರಿಗಣಿಸಲಾಗಿದ್ದು, 2010ರಲ್ಲಿ ಉತ್ತರಾಖಂಡ ಸರ್ಕಾರ ಸಂಸ್ಕೃತ ಎರಡನೇ ಅಧಿಕೃತ ಭಾಷೆ ಎಂದು ಪರಿಗಣಿಸಿರುವ ಮೊದಲ ರಾಜ್ಯವಾಗಿದೆ. ಸಂಸ್ಕೃತ ಸೇರಿದಂತೆ ಹಲವು ಭಾಷೆಗಳ ಮಿಶ್ರಣವಾಗಿರುವ ಹಿಂದಿಯನ್ನು ದೇಶದ ಕೋಟ್ಯಾಂತರ ಮಂದಿ ಮಾತನಾಡುವುದರ ಜೊತೆಗೆ ಅರ್ಥ ಮಾಡಿಕೊಳ್ಳಬಲ್ಲರು ಎಂದು ದೇವಶಿಶ್ ಭಟ್ಟಾಚಾರ್ಯ ತಿಳಿಸಿದ್ದಾರೆ.
ಇದರ ಮಧ್ಯೆ ಉತ್ತರ ಪ್ರದೇಶದ ಅಮೀರ್ಪುರ್ ಜಿಲ್ಲೆಯ ಜಿಲ್ಲಾಧಿಕಾರಿ ಡಾ. ಚಂದ್ರಭೂಷಣ್ ತ್ರಿಪಾಠಿ ಸೆಪ್ಟೆಂಬರ್ 9, 2022 ರಂದು ಸಂಪೂರ್ಣವಾಗಿ ಸಂಸ್ಕೃತದಲ್ಲಿಯೇ ಆದೇಶವೊಂದನ್ನು ಹೊರಡಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಡಾ. ಚಂದ್ರಭೂಷಣ್ ತ್ರಿಪಾಠಿ ಸಂಸ್ಕೃತದಲ್ಲಿ ಪಿ.ಎಚ್.ಡಿ. ಪದವೀಧರರು ಎಂಬುದು ಗಮನಾರ್ಹ ಸಂಗತಿ.