ವಿಶ್ವ ವಿಖ್ಯಾತ ಮೈಸೂರು ದಸರಾಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈಗಾಗಲೇ ಚಾಲನೆ ನೀಡಿದ್ದು, ನಾಡಿನೆಲ್ಲೆಡೆ ಹಬ್ಬದ ಸಂಭ್ರಮ ಮನೆ ಮಾಡಿದೆ. ಕೊರೊನಾ ಕಾರಣಕ್ಕಾಗಿ ಕಳೆದ ಎರಡು ವರ್ಷಗಳಿಂದ ಕಳೆಗುಂದಿದ್ದ ದಸರಾ ಹಬ್ಬ ಈ ಬಾರಿ ತನ್ನ ಎಂದಿನ ವೈಭವವನ್ನು ಮರಳಿ ಪಡೆದಿದೆ.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪ್ರತಿದಿನ ವಿವಿಧ ಕಾರ್ಯಕ್ರಮಗಳು ನಡೆಯುತ್ತಿದ್ದು, ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ. ಆದರೆ ಆಯೋಜಕರಿಂದ ಕೆಲವೊಂದು ಗೊಂದಲಗಳು ಮುಂದುವರೆದಿದೆ ಎನ್ನಲಾಗಿದ್ದು, ದಸರಾ ಸಿನಿಮೋತ್ಸವಕ್ಕೆ ಹೆಚ್ಚಿನ ಪ್ರಚಾರ ಸಿಗದ ಕಾರಣ ಪ್ರೇಕ್ಷಕರು ನಿರೀಕ್ಷಿತ ಸಂಖ್ಯೆಯಲ್ಲಿ ಆಗಮಿಸಿರಲಿಲ್ಲ ಎನ್ನಲಾಗಿದೆ.
ಇದರ ಮಧ್ಯೆ ಇಂದಿನಿಂದ ಸಾರ್ವಜನಿಕರಿಗೆ ‘ಹೆಲಿ ರೈಡ್’ ಆರಂಭವಾಗಿದ್ದು, ಎಂಟು ನಿಮಿಷಗಳ ಕಾಲ ಹೆಲಿಕಾಪ್ಟರ್ ಮೂಲಕ ಮೈಸೂರು ದರ್ಶನ ಮಾಡಿಸಲಾಗುತ್ತದೆ. ಅಕ್ಟೋಬರ್ 5 ರ ವರೆಗೆ ಇದು ನಡೆಯಲಿದ್ದು, ಒಬ್ಬರಿಗೆ ರೂ.3999 ರೂಪಾಯಿಗಳನ್ನು ನಿಗದಿ ಮಾಡಲಾಗಿದೆ. ಸಾರ್ವಜನಿಕರು ಜಯಚಾಮರಾಜೇಂದ್ರ ಒಡೆಯರ್ ಹೆಲಿಪ್ಯಾಡ್ ನಲ್ಲಿ ಇದರ ಸೇವೆ ಪಡೆಯಬಹುದಾಗಿದೆ.