ದೇಶದ ಅತ್ಯಂತ ಸಿರಿವಂತ ಉದ್ಯಮಿ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಮುಂಬೈನಲ್ಲಿ ಐಷಾರಾಮಿ ‘ಅಂಟಿಲ್ಲಾ’ ನಿವಾಸದಲ್ಲಿ ವಾಸಿಸುತ್ತಿದ್ದು, ಈ ನಿವಾಸ ವಿಶ್ವದ ಅತಿ ದುಬಾರಿ ನಿವಾಸಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಇದೀಗ ಈ ನಿವಾಸದ ಕುರಿತಂತೆ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಈ ಹಿಂದೆ ನೀಡಿರುವ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
2019ರಲ್ಲಿ ನವದೆಹಲಿಯಲ್ಲಿ ವಕ್ಫ್ ಬೋರ್ಡ್ ಸಮಾವೇಶ ನಡೆದಿದ್ದು, ಇದರಲ್ಲಿ ಪಾಲ್ಗೊಂಡಿದ್ದ ಅರವಿಂದ್ ಕೇಜ್ರಿವಾಲ್, ಮುಂಬೈನಲ್ಲಿರುವ ಮುಕೇಶ್ ಅಂಬಾನಿ ನಿವಾಸ ವಕ್ಫ್ ಮಂಡಳಿಗೆ ಸೇರಿದ ಜಾಗದಲ್ಲಿ ನಿರ್ಮಾಣವಾಗಿದೆ. ಇದನ್ನು ತೆರವುಗೊಳಿಸುವ ದೃಢ ನಿರ್ಧಾರವನ್ನು ಮಹಾರಾಷ್ಟ್ರ ಸರ್ಕಾರ ತೆಗೆದುಕೊಳ್ಳುತ್ತದೆಯೇ ಎಂದು ಪ್ರಶ್ನಿಸಿದ್ದರು. ಇದೀಗ ಈ ವಿಡಿಯೋವನ್ನು ಭಾರತೀಯ ಜನತಾ ಯುವ ಮೋರ್ಚಾ ರಾಷ್ಟ್ರೀಯ ಕಾರ್ಯದರ್ಶಿ ತಾಜಿಂದರ್ ಪಾಲ್ ಸಿಂಗ್ ಬಗ್ಗಾ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.
ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ಆಚ್ಚರಿಕರ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಆದರೆ ವಾಸ್ತವವಾಗಿ ಈ ಜಾಗ ಇಬ್ರಾಹಿಂ ಕೋಜ್ ಎಂಬ ಅನಾಥಾಶ್ರಮಕ್ಕೆ ಸೇರಿತ್ತು ಎಂದು ಹೇಳಲಾಗಿದ್ದು, ಅನಾಥ ಮಕ್ಕಳಿಗೆ ಶಿಕ್ಷಣ ಸೇರಿದಂತೆ ಇತರೆ ಸೌಲಭ್ಯಗಳನ್ನು ಇದು ನೀಡುತ್ತಿತ್ತು. ಬಳಿಕ ಸಂಸ್ಥೆ ಅನುಮತಿ ಪಡೆದು ಈ ಜಾಗವನ್ನು ಮಾರಾಟ ಮಾಡಲಾಗಿತ್ತು. ಆದರೆ ಈ ಜಾಗ ತಮಗೆ ಸೇರಿದ್ದು ಎಂದು ವಕ್ಫ್ ಬೋರ್ಡ್ ಪ್ರತಿಪಾದಿಸಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿತ್ತು. ಈ ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿ ಇನ್ನೂ ನಡೆಯುತ್ತಿದೆ ಎಂದು ಹೇಳಲಾಗಿದೆ.