ಬಾಗಲಕೋಟೆ: ಲೋಕಾಯುಕ್ತ ಇದ್ದಿದ್ರೆ ಸಿದ್ದರಾಮಯ್ಯ ಜೈಲಿಗೆ ಹೋಗ್ತಿದ್ರು ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಹೇಳಿಕೆಗೆ ತಿರುಗೇಟು ನೀಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಕಟೀಲ್ ಒಬ್ಬ ವಿದೂಷಕ, ಅವರಿಗೆ ಮೆಚ್ಯೂರಿಟಿ ಇಲ್ಲ ಎಂದು ಕಿಡಿಕಾರಿದ್ದಾರೆ.
ಬಾಗಲಕೋಟೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಸರ್ಕಾರದ ವಿರುದ್ಧ ನಾವು 40% ಕಮಿಷನ್ ಆರೋಪ ಮಾಡಿದ ಮೇಲೆ ಬಿಜೆಪಿಯವರು ಈಗ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿತ್ತು ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ನಮ್ಮ ಸರ್ಕಾರ ಹೋಗಿ ಎಷ್ಟು ದಿನ ಆಯ್ತು ? 3 ವರ್ಷಗಳಿಂದ ರಾಜ್ಯದಲ್ಲಿ ಯಾರು ಅಧಿಕಾರದಲ್ಲಿದ್ದಾರೆ ? ನಾವು ಅಧಿಕಾರದಲ್ಲಿದ್ದಾಗ ವಿಪಕ್ಷದಲ್ಲಿ ಇದ್ದವರು ಯಾರು? ಆಗ ಯಾಕೆ ಪ್ರಶ್ನೆ ಮಾಡಿಲ್ಲ? ಬಾಯಲ್ಲಿ ಕಡುಬು ಇತ್ತಾ? ನಾವು ಸರ್ಕಾರದ ವಿರುದ್ಧ ಆರೋಪ ಶುರು ಮಾಡಿದ ಮೇಲೆ ಹೀಗೆ ಆಡ್ತಿದ್ದಾರೆ. 2006ರಿಂದ ಈವರೆಗೆ 16 ವರ್ಷದ್ದು ತನಿಖೆ ಮಾಡಲಿ ಎಂದು ಸವಾಲು ಹಾಕಿದರು.
ಸುಮ್ಮನೇ ಬಿಜೆಪಿಯವರು ಜನರ ಗಮನ ಬೇರೆಡೆ ಸೆಳೆಯುವುದು ಬೇಡ. ನಮ್ಮ ಕಾಲದಲ್ಲಿ ಭ್ರಷ್ಟಾಚಾರ ನಡೆದಿದ್ದರೆ ಬಿಜೆಪಿ ತನಿಖೆ ನಡೆಸಲಿ ಎಂದು ಸದನದಲ್ಲಿಯೇ ಹೇಳಿದ್ದೇನೆ. ನ್ಯಾಯಾಂಗ ತನಿಖೆ ಮಾಡಿಸಿ ಎಂದರೆ ಉತ್ತರವೇ ಇಲ್ಲ ಎಂದು ಗುಡುಗಿದರು.
2018ರಲ್ಲಿ 10% ಆರೋಪ ಮಾಡಿದರು ಅದಕ್ಕೆ ಅವರು ದಾಖಲೆ ಕೊಟ್ರಾ? ಪ್ರಧಾನಿ ಮೋದಿ ರಾಜ್ಯಕ್ಕೆ ಬಂದು ನನ್ನ ವಿರುದ್ಧ 10% ಆರೋಪ ಮಾಡಿದರು. ಮೋದಿಯವರಿಂದ ಹೇಳಿಸಿದ್ದು ಯಾರು? ಯಡಿಯೂರಪ್ಪ ಅಧ್ಯಕ್ಷರಿದ್ದರು ಅಲ್ವಾ? ಕಟೀಲ್ ಎಲ್ಲಿದ್ರು? ಇವರೇ ಪ್ರಧಾನಿ ಮೋದಿಯವರಿಂದ ಹೇಳಿಸಿದ್ದು. ಅದಕ್ಕೆಲ್ಲ ದಾಖಲೆ ಕೊಟ್ಟಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.